ಬೆಳಗಾವಿ: “ಒಂದು ಕಾಲದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಾವಿಯ ಹೆಸರು ಬೆಳಗಿಸಿದ ಕುಸ್ತಿ ಕ್ರೀಡೆ ಪ್ರಸ್ತುತದಲ್ಲಿ ಹಿಂದಿನ ಪ್ರಾಮುಖ್ಯತೆ ಕಳೆದುಕೊಂಡಿದ್ದು ಗ್ರಾಮೀಣ ಭಾಗದಲ್ಲಿ ಇದರ ಅಸ್ತಿತ್ವ ಉಳಿಸಿಕೊಂಡು ಬಂದಿರುವುದು ಶ್ಲಾಘನೀಯ. ಕುಸ್ತಿ ಕ್ರೀಡೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಲಭಿಸಬೇಕಿದೆ” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮದ ಕುಸ್ತಿ ಕಮಿಟಿಯವರು ಆಯೋಜಿಸಿದ್ದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಗೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
“ಹಿಂದಿನ ದಿನಗಳಲ್ಲಿ ಗ್ರಾಮದಲ್ಲಿ ಕನಿಷ್ಠ ಒಂದಾದರೂ ಗರಡಿ ಮನೆ ಇರುತ್ತಿತ್ತು. ಇಂದು ಅವು ಮಾಯವಾಗಿವೆ. ಅಪರೂಪಕ್ಕೆಂಬಂತೆ ಅಲ್ಲಲ್ಲಿ ಗರಡಿಮನೆಗಳು ಕಾಣಸಿಗುತ್ತಿವೆ. ಬೆಳಗಾವಿ ಜಿಲ್ಲೆಯ ಅನೇಕ ಕುಸ್ತಿ ಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಈ ದಿಸೆಯಲ್ಲಿ ಹೆಚ್ಚೆಚ್ಚು ಗರಡಿಮನೆಗಳನ್ನು ಆರಂಭಿಸಿ ಕುಸ್ತಿ ಕ್ರೀಡೆಯ ಹಿಂದಿನ ವೈಭವ ಮರುಕಳಿಸುವಂತೆ ಮಾಡಬೇಕಿದೆ. ಇದಕ್ಕೆ ತಾವು ಸಂಪೂರ್ಣ ಸಹಕಾರ ನೀಡಲು ಬದ್ಧ” ಎಂದರು.
ವಿವಿಧೆಡೆಗಳಿಂದ ಆಗಮಿಸಿದ್ದ ಖ್ಯಾತನಾಮ ಪೈಲ್ವಾನರ ಕುಸ್ತಿ ಪಂದ್ಯ ವೀಕ್ಷಣೆಗೆ ಸಾವಿರಾರು ಜನ ಸೇರಿದ್ದರು. ಇದಕ್ಕೂ ಮುನ್ನ ಅಖಾಡಾಕ್ಕೆ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯಲ್ಲಪ್ಪ ಹರಜಿ, ಗಂಗಣ್ಣ ಕಲ್ಲೂರ, ಶಿವರಾಜ ಜಾಧವ್, ನಿತೀನ್ ಚಿಂಗಳೆ, ಪ್ರಮೋದ್ ತಾಡೆ, ಮಹೇಂದ್ರ ಗೋಟೆ, ಭರಮಾ ಚಿಂಗಳೆ, ನಾಗೇಶ ದೇಸಾಯಿ, ಅಬ್ದುಲ್ ಬಾಗವಾನ್, ಸಂಜು ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.