ಬೆಳಗಾವಿ: ಖಾನಾಪುರದ ಹಲಸಿ ಗ್ರಾಮದಲ್ಲಿ ಕನ್ನಡ ಧ್ವಜ ಸುಟ್ಟು, ಬಸವಣ್ಣನವರ ಭಾವಚಿತ್ರ ವಿರೂಪ ಗೊಳಿಸಿದ ಪ್ರಕರಣದಲ್ಲಿ ಆರೋಪಗಳನ್ನು ಹೆಡೆಮುರಿ ಕಟ್ಟುವಲ್ಲಿ ಬೆಳಗಾವಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆ ನಡೆದ 24 ಗಂಟೆಯಲ್ಲಿ ಕನ್ನಡ ಧ್ವಜ ಸುಟ್ಟ 3 ಆರೋಪಿಗಳು ಅರೇಸ್ಟ್ ಆಗಿದ್ದು, ಬೆಳಗಾವಿ ಜಿಲ್ಲಾ ಪೊಲೀಸರಿಂದ ಮೂವರು ಆರೋಪಿಗಳು ಅಂದರ್ ಆಗಿದ್ದಾರೆ. ಮೊನ್ನೆ ಭಾನುವಾರ ರಾತ್ರಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ನಡೆದಿದ್ದ ಘಟನೆ ಸಾಕಷ್ಟು ಆತಂಕ ಸೃಷ್ಟಿಸಿತ್ತು.
ಹಲಸಿ ಗ್ರಾಮ ಪಂಚಾಯತಿ ಕಾರ್ಯಾಲಯ ಮುಂದಿದ್ದ ಕನ್ನಡ ಧ್ವಜ ಸುಟ್ಟು ಹಾಕಿದ್ದ ಖದಿಮರು, ಬಳಿಕ ಬಸವಣ್ಣನವರ ಭಾವಚಿತ್ರ ವಿರೂಪ ಗೊಳಿಸಿ ವಿಕೃತಿ ಮೆರೆದಿದ್ದರು. ಹಲಸಿ ಗ್ರಾಮದ ನಿವಾಸಿಗಳಾದ ಸಚಿನ್ ಗುರವ್, ಸಂಜು ಗುರವ ಮತ್ತು ಗಣೇಶ ಪೆಂಡೇಕರ ಎಂಬುವರು ಈ ಕೃತ್ಯವೆಸಗಿದ್ದು, ಮೂವರೂ ಇದೀಗ ಪೊಲೀಸ್ ಅತಿಥಿಯಾಗಿದ್ದಾರೆ.
ಇನ್ನು ಬಂಧಿತ ಆರೋಪಿಗಳ ವಿರುದ್ಧ ಕಲಂ 153a, 295, 427 ಮತ್ತು 120B ಐಪಿಸಿ ಅಡಿ ಪ್ರಕರಣ ದಾಖಲು ಮಾಡಲಾಗಿದ್ದು, ಬೆಳಗಾವಿ ಜಿಲ್ಲೆ ನಂದಗಡ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.