ಬಿರು ಬೇಸಿಗೆಗೆ ಬಸವಳಿದ ಬೆಳಗಾವಿ ಜಿಲ್ಲೆಯ ಸಂಬರಗಿ ಗ್ರಾಮದ ಜನ ಶೀಘ್ರವೇ ಮಳೆಯ ಆಗಮನಕ್ಕಾಗಿ ಪ್ರಾರ್ಥಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಕತ್ತೆಗಳ ಮದುವೆ ಮಾಡಿ ವರುಣ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಗ್ರಾಮ ದೇವತೆ ಶ್ರೀ ಚಂದ್ರಗಿರಿ ದೇವಿ ದೇಗುಲದ ಆವರಣದಲ್ಲಿ ಕತ್ತೆಗಳಿಗೆ ಹೊಸ ಬಟ್ಟೆಗಳನ್ನು ಹೊದಿಸಿ ಶಾಸ್ತ್ರೋಕ್ತವಾಗಿ ವಿವಾಹದ ವಿಧಿವಿಧಾನಗಳನ್ನು ನೆರವೇರಿಸಿದರು.
ಕತ್ತೆಗೆ ಬಾಸಿಂಗ, ತಾಳಿ ಕಟ್ಟಿದ ನಂತರ ಮಂಗಳವಾದ್ಯಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಕತ್ತೆಗಳ ಮೆರವಣಿಗೆ ನಡೆಸಲಾಯಿತು.
ಕತ್ತೆ ಮದುವೆ ಕೈಗೊಂಡ ವೇಳೆಯೇ ತುಂತುರು ಮಳೆ ಹನಿಸಿದ್ದು ವಿಶೇಷವಾಗಿತ್ತು. ಗ್ರಾಮದ ಹಿರಿಯರು, ಯುವಜನ, ಮಹಿಳೆಯರು, ಮಕ್ಕಳು ಎಲ್ಲರೂ ಕತ್ತೆಗಳ ಮದುವೆಯಲ್ಲಿ ಪಾಲ್ಗೊಂಡಿದ್ದರು.