ಚಿಕ್ಕಮಗಳೂರು: ವಿಧಾನ ಪರಿಷತನ ಜೆಡಿಎಸ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಗುಣಸಾಗರ ಗ್ರಾಮದ ಬಳಿ ನಡೆದಿದೆ. ನಿನ್ನೆ ಸಂಜೆ 6-30 ರ ಹೊತ್ತಿಗೆ ತಮ್ಮ ಕಾರು ಚಾಲಕನೊಂದಿಗೆ ಗುಣಸಾಗರ ರೈಲ್ವೆ ಟ್ರ್ಯಾಕ್ ಬಳಿ ಬಂದ ಧರ್ಮೇಗೌಡ ನನಗೆ ಒಬ್ಬರ ಜೊತೆ ಖಾಸಗಿಯಾಗಿ ಮಾತನಾಡುವುದಿದೆ ನೀನು ಹೋಗು ಎಂದಿದ್ದರಂತೆ, ಕಾರು ಚಾಲಕ ಹೋದ ಬಳಿಕ ಜನಶತಾಬ್ದಿ ಎಕ್ಸಪ್ರೆಸ್ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಇನ್ನು ಧರ್ಮೆಗೌಡರು ನಿನ್ನೆ ಸಂಜೆ 7 ಗಂಟೆಗೆ ಎಸ್ಕಾರ್ಟ್, ಗನ್ ಮ್ಯಾನ್ ಎಲ್ಲರನ್ನೂ ಮನೆಗೆ ಕಳಿಸಿದ್ದಾರೆ.
ರಾತ್ರಿ 10 ಗಂಟೆಯಾದರೂ ವಾಪಸ್ ಬಾರದ ಹಿನ್ನೆಲೆ ಎಲ್ಲರೂ ಹುಡುಕಾಡಿದ್ದಾರೆ. 11-12 ಗಂಟೆ ವೇಳೆಗೆ ವಿಷಯ ಗೊತ್ತಾಗಿದೆ. ಅಲ್ಲದೇ ಧರ್ಮೇಗೌಡ ಸಾಯುವ ಮುಂಚೆ ಡೆತ್ ನೋಟ ಕೂಡ ಬರೆದಿಟ್ಟಿದ್ದಾರೆ ಎನ್ನಲಾಗಿದ್ದು ಕೆಲ ದಿನಗಳ ಹಿಂದಿನ ವಿಧಾನ ಪರಿಷತ್ ಗಲಾಟೆಯ ಅವಮಾನದ ಕುರಿತು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಎರಡು ವಾರಗಳ ಹಿಂದಷ್ಟೇ ನಡೆದ ಪರಿಷತ್ ಕಲಾಪದ ಸಂದರ್ಭದಲ್ಲಿ ಉಪಸಭಾಪತಿ ಧರ್ಮೆಗೌಡರನ್ನ ಕಾಂಗ್ರೆಸ್ ಸದಸ್ಯರು ಎಳೆದಾಡಿದ್ದರು. ಇದರಿಂದ ಸಹಜವಾಗಿಯೇ ಧರ್ಮೆಗೌಡರು ಮನನೊಂದಿದ್ದರು ಎನ್ನಲಾಗಿದೆ. ಕುಮಾರಸ್ವಾಮಿ ಹಾಗೂ ದೇವೆಗೌಡರಿಗೆ ಕರೆ ಮಾಡಿ ಈ ಕುರಿತು ನೋವು ತೋಡಿಕೊಂಡಿದ್ದರು ಎನ್ನಲಾಗಿದೆ.
ಗ್ರಾ.ಪಂ.ನಿಂದ ಉಪ ಸಭಾಪತಿವರೆಗೆ.
ಬೀರೂರು ಕ್ಷೇತ್ರದ ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ ಅವರ ಪುತ್ರ ಎಸ್.ಎಲ್.ಧರ್ಮೇಗೌಡ ರಾಜಕೀಯದಲ್ಲಿ ದಿಢೀರ್ ಏಳಿಗೆ ಕಂಡವರಲ್ಲ. ತಂದೆ ಶಾಸಕರಾಗಿದ್ದರೂ ಗ್ರಾಮ ಪಂಚಾಯಿತಿ ಮಟ್ಟದಿಂದ ರಾಜಕೀಯ ಶುರು ಮಾಡಿ ವಿಧಾನ ಪರಿಷತ್ ಉಪ ಸಭಾಪತಿ ಹುದ್ದೆಗೇರಿದವರು. 3 ದಶಕಗಳ ರಾಜಕೀಯ ಇತಿಹಾಸದಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೆ ವಿವಿಧ ಹಂತದಲ್ಲಿ ಅಧಿಕಾರ ಹಿಡಿದು ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಗಳಿಸಿದ್ದರು. ಹಿಡಿದ ಕೆಲಸವನ್ನು ಸಾಧಿಸದೆ ಹೆಜ್ಜೆ ಹಿಂದಿಟ್ಟವರಲ್ಲ. ಹಠ ಸಾಧಿಸಿ ಕೆಲಸ ಮಾಡಿಸುವ ಜಾಯಮಾನ ಎಸ್.ಎಲ್.ಧರ್ಮೇಗೌಡ ಅವರದ್ದಾಗಿತ್ತು. ಕಡೂರು ತಾಲೂಕು ಸಖರಾಯಪಟ್ಟಣ ಸಮೀಪದ ಸರಪನಹಳ್ಳಿ ಯವರಾದ ಎಸ್.ಎಲ್.ಧರ್ಮೇಗೌಡ, ಚಿಕ್ಕಮಗಳೂರು ತಾಲೂಕು ಬಿಳೇಕಲ್ಲಹಳ್ಳಿ ಮಂಡಲ ಪಂಚಾಯಿತಿ ಸದಸ್ಯರಾಗಿ, ಮಂಡಲ ಪಂಚಾಯಿತಿ ಪ್ರಧಾನರಾಗುವ ಮೂಲಕ ರಾಜಕೀಯ ರಂಗ ಪ್ರವೇಶ ಮಾಡಿದ್ದರು.
ನಂತರ ಸಹಕಾರ ಕ್ಷೇತ್ರದತ್ತ ಹೊರಳಿದ ಅವರು, ಚಿಕ್ಕಮಗಳೂರು ಟಿಎಪಿಸಿಎಂಎಸ್ ಅಧ್ಯಕ್ಷರಾಗಿ, ಚಿಕ್ಕಮಗಳೂರು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ, ಉದ್ದೇಬೋರನಹಳ್ಳಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ, ಬಿಳೇಕಲ್ಲಹಳ್ಳಿ ಎಂಪಿಸಿಎಸ್ ಅಧ್ಯಕ್ಷರಾಗಿ, ಹಾಸನ ಹಾಲು ಒಕ್ಕೂಟದ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ಅಧ್ಯಕ್ಷರಾಗಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ, ಚಿಕ್ಕಮಗಳೂರು ಜನತಾ ಬಜಾರ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳದ ಅಧ್ಯಕ್ಷ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ, ವಿಮಾ ಸಹಕಾರ ಸಂಘದ ನಿರ್ದೇಶಕ, ರಾಜ್ಯ ಕೈಗಾರಿಕಾ ಬ್ಯಾಂಕ್ ನಿರ್ದೇಶಕ, ಹೊಸದಿಲ್ಲಿಯ ಕ್ರಿಬ್ಕೊ ಸಂಸ್ಥೆ ನಿರ್ದೇಶಕ, ನ್ಯಾಫೆಡ್ ಸಂಸ್ಥೆ ನಿರ್ದೇಶಕ, ಇಂಡಿಯನ್ ಪೊಟಾಷ್ ಲಿಮಿಟೆಡ್ ನಿರ್ದೇಶಕ, ಎನ್ಸಿಡಿಸಿ ನಿರ್ದೇಶಕರಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ರೈತರಿಗೆ ಅನುಕೂಲ ಆಗುವಂತಹ ಕೆಲಸಗಳನ್ನು ಮಾಡಿದ್ದರು. ಒಮ್ಮೆ ತಾಲೂಕು ಪಂಚಾಯಿತಿ ಸದಸ್ಯ, ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಏಕ ಕಾಲಕ್ಕೆ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಿ ಎರಡೂ ಕ್ಷೇತ್ರದಲ್ಲಿ ಆಯ್ಕೆಯಾಗಿ ಜನಸೇವೆ ಮಾಡಿದ ಹೆಗ್ಗಳಿಕೆ ಇವರದ್ದು.
ಬೀರೂರು ವಿಧಾನಸಭಾ ಕ್ಷೇತ್ರದಿಂದ ಜನತಾ ದಳದಿಂದ ಒಂದು ಬಾರಿ ಶಾಸಕರಾಗಿದ್ದರು. ನಂತರ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸಿ.ಟಿ.ರವಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಬೀರೂರು ಕ್ಷೇತ್ರ ಮಾಯವಾದ ಮೇಲೆ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ಸಾಕಷ್ಟು ಪರದಾಡಿದ್ದರು. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯಾದ ನಂತರ ಎಸ್.ಎಲ್.ಧರ್ಮೇಗೌಡ ಅವರನ್ನು ವಿಧಾನ ಪರಿಷತ್ಗೆ ನೇಮಕ ಮಾಡಲಾಗಿತ್ತು. ನಂತರ ಉಪ ಸಭಾಪತಿ ಸ್ಥಾನವೂ ದಕ್ಕಿತ್ತು. ಮೊನ್ನೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ವಿಧಾನ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ಪ್ರಕರಣದಲ್ಲಿ ಸಭಾಪತಿ ಪೀಠದಲ್ಲಿ ಕುಳಿತಿದ್ದ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ಅವರನ್ನು ಸದಸ್ಯರು ಎಳೆದಾಡಿ ರಂಪ ರಾಮಾಯಣ ಮಾಡಿದ್ದರು. ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದ ಎಸ್.ಎಲ್.ಧರ್ಮೇಗೌಡ ಆತ್ಮಹತ್ಯೆಗೆ ಶರಣಾಗುವಷ್ಟು ದುರ್ಬಲ ಮನಸ್ಸಿನವರಲ್ಲ ಎಂಬುದು ಜನರ ಅಭಿಪ್ರಾಯ. ಕೆಲ ವರ್ಷಗಳಿಂದ ಅನಾರೋಗ್ಯ ಕಾಣಿಸಿಕೊಂಡ ಕಾರಣ ಆರೋಗ್ಯದ ಬಗ್ಗೆ ಅತಿಹೆಚ್ಚು ಕಾಳಜಿ ವಹಿಸುತ್ತಿದ್ದರು. ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿದೆ. ಈ ಹಿಂದೆ ಜೆಡಿಎಸ್ ಪಕ್ಷದಿಂದ ಶಾಸಕರಾಗಿದ್ದ ಧರ್ಮೆಗೌಡರು, 2018 ರಲ್ಲಿ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದರು.