ಗೀತರಚನೆಕಾರನಾಗಿ ಸಾಕಷ್ಟು ಜನಪ್ರಿಯ ಚಿತ್ರಗೀತೆಗಳನ್ನು ಬರೆದಿರುವ ಲೋಕಲ್ ಲೋಕಿ ನಿರ್ದೇಶನದ “ಮಾಜರ್” ಚಿತ್ರದ ಹಾಡುಗಳನ್ನು ಸಚಿವ ಕೆ.ಗೋಪಾಲಯ್ಯ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಾಯಕ ಶ್ರೀನಗರ ಕಿಟ್ಟಿ, ರಾಜಕೀಯ ಮುಖಂಡರಾದ ಜಯರಾಮ್ ಮುಂತಾದ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ, ತಮ್ಮ ಪ್ರೋತ್ಸಾಹಭರಿತ ಮಾತುಗಳ ಮೂಲಕ ಚಿತ್ರಕ್ಕೆ ಶುಭ ಹಾರೈಸಿದರು. A2 music ಮೂಲಕ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ.
ನಾನು ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗೀತರಚನೆಕಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈಗ “ಮಾಜರ್” ಎಂಬ ಚಿತ್ರವನ್ನು ನಿರ್ದೇಶಿಸಿದ್ದೇನೆ. ಈ ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ಮೂರು ಬಿಟ್ ಗಳಿದೆ. ಎಲ್ಲಾ ಹಾಡುಗಳನ್ನು ನಾನೇ ಬರೆದಿದ್ದೇನೆ. ಹುಚ್ಚ ವೆಂಕಟ್, ಸಂತೋಷ್ ವೆಂಕಿ, ಶಶಾಂಕ್ ಶೇಷಗಿರಿ ಹಾಡಿದ್ದಾರೆ. ಎ.ಟಿ.ರವೀಶ್ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ರಾಜೇಶ್ ರಾಮನಾಥ್ ಅವರದು. ಇನ್ನು ಚಿತ್ರದ ಬಗ್ಗೆ ಹೇಳುವುದಾದರೆ, ಅನಾದಿಕಾಲದಿಂದಲೂ ಹೆಣ್ಣಿನ ಶೋಷಣೆ ನಡೆಯುತ್ತಲೇ ಇದೆ. ಆದರೆ ತಪಿತಸ್ಥರಿಗೆ ನೀಡುವ ಶಿಕ್ಷೆ ಬಹಳ ಕಡಿಮೆ. ಹೆಣ್ಣನ್ನು ಶೋಷಣೆ ಮಾಡಿದವರಿಗೆ ಯಾವ ರೀತಿ ಶಿಕ್ಷೆ ನೀಡಬೇಕೆಂದು ಈ ಚಿತ್ರದಲ್ಲಿ ತೋರಿಸಿದ್ದೇವೆ. ಬರೀ ಇಷ್ಟೇ ಅಲ್ಲ. ಲವ್ ಸ್ಟೋರಿ ಕೂಡ ನಮ್ಮ ಚಿತ್ರದಲ್ಲಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಲೋಕಲ್ ಲೋಕಿ ಹೇಳಿದರು.
ಕನ್ನಡದಲ್ಲಿ ಚಿತ್ರವೊಂದನ್ನು ನಿರ್ಮಿಸುವ ಆಸೆಯಿತ್ತು. ಲೋಕಿ ಅವರು ಹೇಳಿದ ಕಥೆ ಇಷ್ಟವಾಗಿ, ನಿರ್ಮಾಣ ಮಾಡಿದ್ದೇನೆ ಎಂದರು ನಿರ್ಮಾಪಕ ಮುರುಗನಂಥನ್. ಹಾಡುಗಳ ಬಗ್ಗೆ ಎ.ಟಿ.ರವೀಶ್ ಮಾಹಿತಿ ನೀಡಿದರು. ಚಿತ್ರದಲ್ಲಿ ನಟಿಸಿರುವ ಉಗ್ರಂ ರವಿ, ಅರ್ಜುನ್, ರಂಜಿತ್ ಪ್ರಿನ್ಸ್ ಹಾಗೂ ನೃತ್ಯ ನಿರ್ದೇಶಕರಾದ ಸೈ ಗೀತ, ವಾಸ್ತು ನಾಗ “ಮಾಜರ್” ಚಿತ್ರದ ಬಗ್ಗೆ ಮಾತನಾಡಿದರು.