ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದೆ. ಇನ್ನು ಎರಡು ವರ್ಷಗಳ ಕಾಲ ಅಧಿಕಾರ ಇದೆ. ಈ ನಡುವೆ ಡಿಕೆಶಿ ಮತ್ತು ಸಿದ್ದರಾಮಯ್ಯನವರು ಸಿಎಂ ಕುರ್ಚಿಗೆ ಬಿಗ್ ಫೈಟ್ ನಡೆಸುತ್ತಿದ್ದಾರೆ. ಇದನ್ನು ಗಮನಿಸಿದರೆ ಕಾಂಗ್ರೆಸ್ ನವರು ಕತ್ತಲ ಕೋಣೆಯಲ್ಲಿ ಇಲ್ಲದ ಕರಿ ಬೆಕ್ಕಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಅನಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಶಿವಮೊಗ್ಗದಲ್ಲಿ ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಈಶ್ವರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾನು ಮುಂದಿನ ಸಿಎಂ ರೇಸ್ ನಲ್ಲಿ ಇಲ್ಲ. ಶಾಸಕರು ಹೀಗೆ ಮಾತನಾಡಬೇಡಿ. ಮಾತನಾಡಿದರೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಕಠಿಣ ನಿಲುವು ತೆಗೆದುಕೊಳ್ಳಲಿ ನೋಡೋಣ ಎಂದು ಸವಾಲೆಸೆದರು. ಮುಖ್ಯಮಂತ್ರಿ ಖುರ್ಚಿ ಕನಸು ಕಾಣುವ ಮೊದಲು ಸಿದ್ದರಾಮಯ್ಯ ಸೇರಿ ಎಲ್ಲರೂ ಗೆದ್ದು ಬರಬೇಕು. ಅವರ ಪಕ್ಷಕ್ಕೆ ಬಹುಮತ ಬರಬೇಕು. ಅವರ ಶಾಸಕರು ಒಪ್ಪಿಗೆ ಕೊಡಬೇಕು. ನಂತರ ಕೇಂದ್ರದ ನಾಯಕರು ತೀರ್ಮಾನ ಮಾಡಬೇಕು. ಕಾಂಗ್ರೆಸ್ ಶಾಸಕರಾದ ಜಮೀರ್, ರಾಮಪ್ಪ, ಅಖಂಡ ಶ್ರೀನಿವಾಸ್ ಮೂರ್ತಿ ಅವರುಗಳು ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳಿದ ತಕ್ಷಣ ಸಿಎಂ ಆಗುವುದಕ್ಕೆ ಏನು ಮುಖ್ಯಮಂತ್ರಿ ಸ್ಥಾನ ಅವರ ಜೇಬಿನಲ್ಲಿ ಇದೆಯಾ ಎಂದು ಗೇಲಿ ಮಾಡಿದರು.
ರಾಜ್ಯದ ಜನರು ಕಾಂಗ್ರೆಸ್ ಸೋಲಿಸಿ ಮನೆಗೆ ಕಳುಹಿಸಿದ್ದಾರೆ. ಮುಖ್ಯಮಂತ್ರಿ ಆಗಿದ್ದಂತಹ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದರು. ಸದ್ಯ 72 ಸ್ಥಾನ ಪಡೆದಿದ್ದೀರಿ. ಲೋಕ ಸಭೆಯಲ್ಲಿ ಒಂದೇ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಮುಂದಿನ ಚುನಾವಣೆಯಲ್ಲಿ 72 ಸ್ಥಾನ ಬರುತ್ತದೋ ಇಲ್ಲವೋ ಅದು ಗೊತ್ತಿಲ್ಲ ವಿರೋಧ ಪಕ್ಷದ ಸ್ಥಾನವು ಸಿಗುತ್ತದೋ ಇಲ್ಲವೋ ಆ ನಂಬಿಕೆಯು ಇಲ್ಲ. ಈಗಿರುವಾಗ ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿರುವುದು ಹಾಸ್ಯಾಸ್ಪದ ಎಂದರು.