ಕೂಗು ನಿಮ್ಮದು ಧ್ವನಿ ನಮ್ಮದು

ಸಿಎಂ ಕುರ್ಚಿ ಕನಸು ಕಾಣುವ ಮೊದಲು ಶಾಸಕರಾಗಿ ಗೆದ್ದು ಬರಲಿ: ಈಶ್ವರಪ್ಪ

ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಕನಸು ಕಾಣುವ ಮೊದಲು ಇಬ್ಬರು ಶಾಸಕರಾಗಿ ಗೆದ್ದು ಬರಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಸವಾಲು ಹಾಕಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪನವರು, ಕಾಂಗ್ರೆಸ್‍ನವರು ಐದು ವರ್ಷ ರಾಜ್ಯದಲ್ಲಿ ಆಗೋ ಹೀಗೋ ಅಧಿಕಾರ ನಡೆಸಿದರು. ನಂತರ ಜನ ಈ ಸರ್ಕಾರ ಬೇಡ ಎಂದು ಅವರನ್ನು ಸೋಲಿಸಿ ಮನೆಗೆ ಕಳುಹಿಸಿದರು. ಮುಖ್ಯಮಂತ್ರಿ ಆಗಿದ್ದಂತಹ ಸಿದ್ದರಾಮಯ್ಯ ಅವರನ್ನು ಸಹ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದರು. ಬದಾಮಿ ಕ್ಷೇತ್ರದಲ್ಲಿ ಹರಸಾಹಸ ಪಟ್ಟು ಗೆದ್ದಿದ್ದಾರೆ. ಇದೀಗ ಚಾಮರಾಜಪೇಟೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಕಳೆದ ಬಾರಿಯ ವಿಧಾನ ಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್‍ನ ಹಲವು ಸಚಿವರು, ಶಾಸಕರನ್ನು ಮತದಾರರು ಸೋಲಿಸಿದರು. ಈಗಿದ್ದರೂ ಸಹ ಮುಖ್ಯಮಂತ್ರಿ ಆಗೋ ಕನಸು ಇನ್ನು ಅವರಿಗೆ ಬೀಳುತ್ತಿದೆ. ಇದೀಗ ಡಿಕೆಶಿ ಹಾಗೂ ಸಿದ್ದರಾಮಯ್ಯ ಇಬ್ಬರು ಮುಖ್ಯಮಂತ್ರಿ ಆಗೋ ಕನಸು ಕಾಣುತ್ತಿದ್ದಾರೆ. ಮುಖ್ಯಮಂತ್ರಿ ಕುರ್ಚಿಯ ಕನಸು ಕಾಣುವ ಮೊದಲು ಶಾಸಕರಾಗಿ ಗೆದ್ದು ಬರುವುದನ್ನು ನೋಡಲಿ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹುಮತ ಎನ್ನುವ ಪ್ರಶ್ನೆಯೇ ಇಲ್ಲ. ಇನ್ನು ಎರಡು ವರ್ಷಗಳ ಕಾಲ ಬಿಜೆಪಿ ಸರ್ಕಾರ ಯಡಿಯೂರಪ್ಪನವರ ನೇತೃತ್ವದಲ್ಲಿ ಆಡಳಿತ ನಡೆಸುತ್ತೇವೆ. ಮುಂದಿನ ಬಾರಿ ಚುನಾವಣೆಯಲ್ಲಿ ಸಹ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

error: Content is protected !!