ಶಿವಮೊಗ್ಗ: ಕಲ್ಲು ತೂರಾಟ, ಹಿಂಸಾಚಾರ ಬಿಟ್ಟು ಬಿಡಿ. ನಿಮಗಿಂತ ಹೆಚ್ಚಾಗಿ ನನಗೆ ರೋಷ ಇದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಯುವಕ ಹರ್ಷನ ಬರ್ಬರವಾಗಿ ಕೊಲೆಯಾಗಿದ್ದು, ಮೃತದೇಹ ನೋಡಲು ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ರಾಘವೇಂದ್ರ ಭೇಟಿ ನೀಡಿದ್ದಾರೆ. ನಂತರ ಸೀಗೆಹಟ್ಟಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಮೋದಿ, ಬಿಎಸ್ವೈ, ಸಿಎಂ ಮಾತು ಕೇಳಬೇಕು. ಕಲ್ಲು ತೂರಾಟ, ಹಿಂಸಾಚಾರ ಬಿಡಿ. ನಿಮಗಿಂತ ಹೆಚ್ಚಾಗಿ ನನಗೆ ರೋಷ ಇದೆ ಎಂದು ಹೇಳಿದ್ದಾರೆ.
ಎಲ್ಲಆರೋಪಿಗಳನ್ನು ಎನ್ಕೌಂಟರ್ ಮಾಡಿ ಅಂತಾ ಹೇಳ್ತಿದ್ದಾರೆ. ನೀವು ಹೇಳಿದಂಗೆ ಎನ್ಕೌಂಟರ್ ಮಾಡೋಕ್ಕೆ ಆಗಲ್ಲ. ಶಿವಮೊಗ್ಗದಲ್ಲಿ ಮೊದಲು ಶಾಂತಿ ಕಾಪಾಡೋಣ. ಸರ್ಕಾರ ಎಲ್ಲಾ ಕ್ರಮವನ್ನು ಕೈಗೊಳ್ಳಬೇಕು, ಕೈಗೊಳ್ಳುತ್ತೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ಕೊಲೆ ಪ್ರಕರಣ ಸಂಬಂಧ ಇವತ್ತು ಮುಂಜಾನೆ ಮಾತನಾಡಿದ್ದ ಕೆ.ಎಸ್.ಈಶ್ವರಪ್ಪ, ನಮ್ಮ ಸಜ್ಜನ ಕಾರ್ಯಕರ್ತನ ಕೊಲೆ ಆಗಿದೆ. ಮುಸಲ್ಮಾನ ಗೂಂಡಾಗಳಿಂದ ಈ ಕೊಲೆ ನಡೆದಿದೆ.
ಶಿವಮೊಗ್ಗದಲ್ಲಿ ಈ ಮುಸಲ್ಮಾನ ಗೂಂಡಾಗಳು ಬಾಲ ಬಿಚ್ಚಿರಲಿಲ್ಲ. ಕೇಸರಿ ಶಾಲು ಹಂಚಿದ್ದಾರೆ. ರಾಷ್ಟ್ರಧ್ವಜ ತೆಗೆದು ಭಗವಾಧ್ವಜ ಹಾರಿಸಿದ್ದಾರೆ. ಎಂಬಂತಹ ಡಿ.ಕೆ. ಶಿವಕುಮಾರ್ ಪ್ರಚೋದನಕಾರಿ ಹೇಳಿಕೆಗಳಿಂದ ಕುಮ್ಮಕ್ಕು ಪಡೆದು ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದಾರೆ. ಮುಸಲ್ಮಾನ ಗೂಂಡಾಗಳಿಗೆ ಇಷ್ಟು ಧೈರ್ಯ ಬಂದಿದೆ. ಸರ್ಕಾರ ಈ ಬಗ್ಗೆ ತನಿಖೆ ಮಾಡುತ್ತಿದೆ ಎಂದು ಈಶ್ವರಪ್ಪ ಕಿಡಿಕಾರಿದ್ದರು. ಸಚಿವರ ಈ ಹೆಳಿಕೆ ಭಾರೀ ವಿವಾದ ಎಬ್ಬಿಸಿದ್ದು, ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.