ಬೆಂಗಳೂರು: ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದ ಹಿನ್ನೆಲೆ ಶಾಸಕ ಜಮೀರ್ ಅಹ್ಮದ್ ಖಾನ್ ದೆಹಲಿಗೆ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇವತ್ತು ಬೆಳಗ್ಗೆ ಸುಮಾರು ೧೧ ಗಂಟೆಗೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ದೆಹಲಿಗೆ ಹೋಗಿದ್ದಾರೆ ಎನ್ನಲಾಗಿದೆ.
ಆಗಸ್ಟ್ ೫ರಂದು ದಾಳಿ ಮಾಡಿದ್ದ ಜಾರಿ ನಿರ್ದೇಶನಾಲಯ ಆಸ್ತಿಗೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ಸಲ್ಲಿಸುವಂತೆ ಸಮಯ ಅವಕಾಶ ನೀಡಿತ್ತು. ಇಡಿ ನೀಡಿದ ಸಮಯ ಅಂತ್ಯ ಆಗಿದ್ದರಿಂದ ವಿಚಾರಣೆಗಾಗಿಯೇ ಜಮೀರ್ ಅಹ್ಮದ್ ಖಾನ್ ದೆಹಲಿಗೆ ಹೋಗಿರುವ ಬಗ್ಗೆ ಅವರ ಆಪ್ತ ಮೂಲಗಳು ಖಚಿತ ಪಡಿಸಿವೆ. ಇಡಿ ವಿಚಾರವಾಗಿ ಶುಕ್ರವಾರ KPCC ಅಧ್ಯಕ್ಷ ಡಿಕೆಶಿ ಅವರನ್ನ ಜಮೀರ್ ಅಹ್ಮದ್ ಖಾನ್ ಭೇಟಿಯಾಗಿ ಚರ್ಚೆ ನಡೆಸಿದ್ರು.
ಇಡಿ ವಿಚಾರಣೆಯನ್ನು ಎದುರಿಸುವುದು ಹೇಗೆ? ಹಿಂದಿನ ಘಟನಾವಳಿಗಳ ಬಗ್ಗೆ ಡಿಕೆಶಿ ಬಳಿ ತಿಳಿದುಕೊಂಡಿದ್ದಾರೆ ಎನ್ನಲಾಗಿದೆ. ಇಡಿಯ ರೀತಿ ರಿವಾಜುಗಳ ಬಗ್ಗೆ ಡಿಕೆಶಿ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಜೊತೆಗೆ ನಿನ್ನೆ ಜಮೀರ್ ಅಹ್ಮದ್ ತಮ್ಮ ಟ್ವಿಟ್ಟರ್ ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ನಾನು ಮನೆ ಕಟ್ಟಿಸಿರುವುದೇ ದೊಡ್ಡ ಅಪರಾಧ ಎಂಬುವಂತೆ ಬಿಂಬಿಸಲಾಗುತ್ತಿದೆ. ಇನ್ನೂ ಮುಸ್ಲಿಂ ನಾಯಕರಿಗೆ ಕಿರುಕುಳ ನೀಡುವ ಪ್ರಯತ್ನ ಎಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ.