ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆಯಾಗದ ಹಿನ್ನೆಲೆ ಕ್ಷೇತ್ರದ ಶಾಸಕ ಜಗದೀಶ್ ಶೆಟ್ಟರ್ ಅವರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆ ಇಂದು ತಮ್ಮ ನಿವಾಸದಲ್ಲಿ ಬೆಂಬಲಿಗರ ಜೊತೆ ಸಭೆ ನಡೆಸಿ ಭಾವುಕ ಮಾತುಗಳನ್ನು ಆಡಿದ್ದಾರೆ. ಬಿಜೆಪಿ ನನಗೆ ಎಲ್ಲಾ ಸ್ಥಾನಮಾನ ನೀಡಿದೆ, ಹಾಗಾಗಿ ಋಣಿಯಾಗಿರುವೆ. ಶಾಸಕ, ಸಚಿವ, ವಿಪಕ್ಷ ನಾಯಕ, ಸ್ಪೀಕರ್, ಸಿಎಂ ಆಗಿ ಸೇವೆ ಮಾಡಿರುವೆ. ಇದುವರೆಗೆ 6 ಬಾರಿ ಚುನಾವಣೆಗೆ ಸ್ಪರ್ಧಿಸಿ ಬಹುಮತದಿಂದ ಗೆದ್ದಿದ್ದೇನೆ ಎಂದು ಹೇಳಿದರು.
ಹುಬ್ಬಳ್ಳಿಯ ಕೇಶ್ವಾಪುರದ ಮಧುರಾ ಕಾಲೋನಿಯಲ್ಲಿರುವ ನಿವಾಸದಲ್ಲಿ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು 7ನೇ ಬಾರಿ ಅತ್ಯಧಿಕ ಬಹುಮತದಿಂದ ಗೆಲ್ಲಿಸುವುದಾಗಿ ಜನ ಹೇಳುತ್ತಿದ್ದಾರೆ. ಆದರೆ ಪಕ್ಷ ಈ ಕ್ಷೇತ್ರ ಸೇರಿದಂತೆ 12 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿಲ್ಲ. ಟಿಕೆಟ್ ವಿಚಾರವಾಗಿ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗಿ ಬಂದಿರುವೆ. ನನಗೆ ಅಧಿಕಾರದ ದಾಹವಿಲ್ಲ, ಜನಸೇವೆ ಮಾಡಲು ಅವಕಾಶ ಕೇಳಿದ್ದೇನೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಬಂದು ಹೋಗಿದ್ದಾರೆ. ಕೇಂದ್ರದ ನಾಯಕರು ನನಗೆ ಟಿಕೆಟ್ ಘೋಷಿಸುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮತ್ತೆ ಕಾದು ನೋಡುವ ತಂತ್ರ ಅನುಸರಿಸಿದ ಜಗದೀಶ ಶೆಟ್ಟರ್
ಇದು ಹು-ಧಾ ಸೆಂಟ್ರಲ್ ಕ್ಷೇತ್ರದ ಜನರ, ನನ್ನ ಸ್ವಾಭಿಮಾನದ ಪ್ರಶ್ನೆ. ಟಿಕೆಟ್ ಘೋಷಣೆಗೆ ಇಂದು ಸಂಜೆಯವರೆಗೆ ಟೈಮ್ ಇದೆ. ನನಗೆ ಬಿಜೆಪಿ ಟಿಕೆಟ್ ನೀಡುವ ವಿಶ್ವಾಸವಿದೆ, ಆನಂತರ ನೋಡೋಣ. ನಿಮ್ಮ ಆಶೀರ್ವಾದದಿಂದ ಈ ಭಾಗಕ್ಕೆ ಹೆಚ್ಚು ಒತ್ತು ಕೊಡಲು ಸಾಧ್ಯವಾಯಿತು. ಈ ಭಾಗದಲ್ಲಿ ಬಿಜೆಪಿ ಕಟ್ಟಿ ಬೆಳಸಲು ಶ್ರಮಿಸಿದವರಲ್ಲಿ ನಾನು ಒಬ್ಬ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ದಿವಂಗತ ಬಿಜೆಪಿ ನಾಯಕ ಅನಂತ ಕುಮಾರ ಅವರ ಜೊತೆಗೆ ಪಕ್ಷ ಕಟ್ಟಿದ್ದೇನೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಗಟ್ಟಿಯಾಗಿದೆ ಎಂದು ತಿಳಸಿದರು.
ಜಗದೀಶ್ ಶೆಟ್ಟರ್ ಹೆಸರು ಯಾಕೆ ಬರಲಿಲ್ಲ ಅನ್ನೋ ಕಳವಳ ಇದೆ. ಬೆಳಗಾವಿ ಸೇರಿ ರಾಜ್ಯದ ನಾನ ಕಡೆ ಜನ ಕಳವಳ ವ್ಯಕ್ತಪಡಿಸಿದ್ದಾರೆ. ಎರಡು ದಿನದ ಹಿಂದೆ ರಾಷ್ಟ್ರೀಯ ಅಧ್ಯಕ್ಷರು ಕರೆ ಮಾಡಿದ್ದರು. ನಾನು ಅವರಿಗೆ ಗೌರವ ಕೊಟ್ಟು ಹೋಗಿ ಬಂದೆ. ನಾನು ರಾಜಕೀಯಕ್ಕೆ ಬಂದಿದ್ದು ಆ್ಯಕ್ಸಿಡೆಂಡ್ಲಿ. ಅವಕಾಶ ಸಿಕ್ತು ಸದುಪಯೋಗ ಮಾಡಿಕೊಂಡೆ. ನಾನು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಇನ್ನೊಂದು ಬಾರಿ ಅವಕಾಶ ಕೊಡಿ ಎಂದಿದ್ದೆ. ಎರಡು ದಿನದಲ್ಲಿ ತಿಳಸ್ತೀನಿ ಅಂದಿದ್ದರು ಎಂದು ತಿಳಿಸಿದ್ದಾರೆ.
ನನಗೆ ಟಿಕೆಟ್ ಕೊಡೋ ವಿಶ್ವಾಸ ಇದೆ. ಇವತ್ತು ಎಲ್ಲ ರೀತಿ ಪ್ರಯತ್ನ ನಡೀತಿದೆ. ನನಗೆ ಇವಾಗಲೂ ಟಿಕೆಟ್ ಕೊಡ್ತಾರೆ ಅನ್ನೋ ಹೋಪ್ಸ್ ಇದೆ. ಯಡಿಯೂರಪ್ಪ ಅವರ ಬೆಂಬಲ ನನಗೆ ಇದೆ. ಯಡಿಯೂರಪ್ಪ ಸ್ಪರ್ಧೆ ಮಾಡಿ ಎಂದು ಒಪನ್ ಆಗಿ ಹೇಳಿದ್ದಾರೆ. ನನಗೆ ನಿಮ್ಮ ಶಕ್ತಿ ಇದೆ. ನೀವು ಇರದೆ ಹೋದರೆ ನಾನು ಜಿರೋ. ನಿಮ್ಮ ಬೆಂಬಲ ಜೀವನದಲ್ಲಿ ಮರೆಯಲ್ಲ. ನಾವು ಯಾರನ್ನೂ ಟೀಕೆ ಮಾಡಬಾರದು. ನಮ್ಮ ಕುಟುಂಬ ಜನ ಸಂಘದಿಂದ ಬಿಜೆಪಿವರೆಗೂ ಬಂದಿದೆ. ಇದೆಲ್ಲ ವರಿಷ್ಠರಿಗೆ ಗೊತ್ತಿದೆ ಎಂದು ಭಾವುಕರಾಗಿ ಭಾಷಣ ಮುಗಿಸಿದ್ದಾರೆ.