ಬೆಂಗಳೂರು : ಇಲ್ಲಿಯವರೆಗೂ ದೇಶದ ಕೆಂಪು ಕೋಟೆ ಸೇರಿದಂತೆ ಸರ್ಕಾರಿ ಕಟ್ಟಡಗಳು, ಸಂಘಸಂಸ್ಥೆಗಳಲ್ಲಿ ಖಾದಿ ರಾಷ್ಟ್ರಧ್ವಜಗಳು ದೇಶದ ಹೆಮ್ಮೆಯ ಪ್ರತೀಕವಾಗಿ ರಾರಾಜಿಸುತ್ತಿದ್ದವು. ಇದೀಗ ಕೇಂದ್ರ ಸರ್ಕಾರ ಧ್ವಜ ಸಂಹಿತೆಯಲ್ಲಿ ಮಾಡಿದ ತಿದ್ದುಪಡಿಯಿಂದಾಗಿ ಕೈಯಲ್ಲಿ ನೂಲುವ ಖಾದಿ ತ್ರಿವರ್ಣ ಧ್ವಜಗಳೇ ಅಲ್ಲದೆ ಯಂತ್ರಗಳಲ್ಲಿ ಮಾಡುವ ಪಾಲಿಸ್ಟರ್ ಧ್ವಜಗಳನ್ನು ಕೂಡ ಬಳಸಲು ಅನುಮತಿಸಿದೆ. ಅಲ್ಲದೆ ಹರ್ ಘರ್ ತಿರಂಗ ಅಭಿಯಾನದಡಿ ರಾತ್ರಿ ಹಗಲು ಸಾರ್ವಜನಿಕವಾಗಿ ಮನೆಗಳಲ್ಲಿ ಪ್ರದರ್ಶಿಸಲು ಬಯಸಿದರೆ, ಇದಕ್ಕೆ ಅನುಮತಿ ನೀಡುವ ತಿದ್ದುಪಡಿಯನ್ನೂ ಮಾಡಲಾಗಿದೆ.
ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿದ ಗಾಂಧಿ ಭವನ ಬಳಿಯ ಖಾದಿ ಎಂಪೋರಿಯಂ ವ್ಯವಸ್ಥಾಪಕ ಸಂಗಮೇಶ್ವರ್ ಮಠ್, ಮಾರುಕಟ್ಟೆಗಳಲ್ಲಿ ಪಾಲಿಸ್ಟರ್ ಧ್ವಜಗಳು ಕೈಗೆಟಕುವ ದರದಲ್ಲಿದೆ ಎಂಬ ಕಾರಣಕ್ಕಾಗಿ ಹೆಚ್ಚು ಮಾರಾಟ ನಡೆಯುತ್ತಿವೆ. ಈ ನಡುವೆ ಖಾದಿ ವಸ್ತ್ರದ ತ್ರಿವರ್ಣ ಧ್ವಜಕ್ಕೂ ಉತ್ತಮ ಬೇಡಿಕೆ ಇದೆ. ಈ ವರ್ಷ ಮನೆ ಮನೆ ತ್ರಿವರ್ಣ ಧ್ವಜದ ಅಭಿಯಾನದ ಹಿನ್ನಲೆ ಪ್ರತೀ ವರ್ಷಕ್ಕಿಂತ ಈ ಬಾರಿ ಮೂರು ಪಟ್ಟು ಹೆಚ್ಚು ವ್ಯಾಪಾರ ನಡೆದಿದೆ. ಈ ವರ್ಷ 34 ಲಕ್ಷ ವ್ಯಾಪಾರ ಆಗಷ್ಟ್ 12 ರವರೆಗೆ ನಡೆದಿದೆ ಎಂದು ತಿಳಿಸಿದ್ದಾರೆ.
ಇವರ ಹೇಳಿಕೆ ಪ್ರಕಾರ ರಾಷ್ಟ್ರಧ್ವಜ ತಯಾರಿಸುವಾಗ ಶುದ್ಧವಸ್ತ್ರದ, ಅಳತೆ, ಹೊಲಿಗೆ, ಬಣ್ಣ ಎಲ್ಲವೂ ನಿಯಮಬದ್ಧವಾಗಿ ಇರಬೇಕಾಗುತ್ತದೆ. ಆದರೆ ಪಾಲಿಸ್ಟರ್ ಧ್ವಜಗಳ ಮಾರಾಟಗಾರರು ಅಥವಾ ಉತ್ಪಾದಕರು ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದು, ಬೇಕಾಬಿಟ್ಟಿಯಾಗಿ ತಯಾರಿಸಲಾಗ್ತಿದೆ ಎಂದಿದ್ದಾರೆ. ಅಲ್ಲದೆ ಸರ್ಕಾರದ ಪೂರ್ವಸಿದ್ಧತೆ ಮೊದಲೇ ಆಗಿದ್ದರೆ ಇನ್ನೂ ಅನುಕೂಲವಾಗುತ್ತಿತ್ತು . ಬೇಡಿಕೆಗೆ ತಕ್ಕಂತೆ ಧ್ವಜ ಪೂರೈಕೆಗೆ ಸಮಯ ಸಾಲುತ್ತಿಲ್ಲ. ಸಮಯದ ಅಭಾವದಿಂದ ಹೆಚ್ಚಿನ ಧ್ವಜ ತಯಾರಿಸಲು ಸಾಧ್ಯವಾಗಿಲ್ಲ.
ರಾಷ್ಟ್ರಧ್ವಜ ತಯಾರಿಕೆಗೆ ಇರೋದು ಹುಬ್ಬಳ್ಳಿ ಬೆಂಗೇರಿಯ ಕರ್ನಾಟಕ ಖಾದಿ ಗ್ರಮೋದ್ಯೋಗ ಸಂಯುಕ್ತ ಸಂಘ ಎಂಬ ಏಕೈಕ ಸಂಸ್ಥೆ. ಇಲ್ಲಿ ಧ್ವಜದ ಅಳತೆ, ಬಟ್ಟೆ ಬಗ್ಗೆ ಪ್ರತ್ಯೇಕ ನೀತಿ ನಿಯಮ ಪಾಲನೆ ಆಗುತ್ತದೆ. ಗ್ರಾಮೀಣ ಜನರಿಂದ ಗ್ರಾಮೋದ್ಯೋಗದಿಂದ ತಯಾರಿಸುವುದು ಹೆಮ್ಮೆಯ ವಿಚಾರ. 1 ವರೇ ಅಡಿಯಿಂದ 21 ಅಡಿಯವರೆಗೂ ಧ್ವಜ ತಯಾರಿಸಲಾಗುತ್ತದೆ. 400 ರೂ. ನಿಂದ 25,485 ರೂಪಾಯಿ ವರೆಗೂ ಮಾರಾಟ ಮಾಡಲಾಗುತ್ತದೆ. ಕೇಂದ್ರ ಸರ್ಕಾರ ರಾಷ್ಟ್ರಧ್ವಜ ಸಂಹಿತೆ ತಿದ್ದುಪಡಿ ಮಾಡಿದ್ದು ನೋವಿನ ಸಂಗತಿ. ಹಲವೆಡೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ ಕೆಲಸಗಳಾಗ್ತಿವೆ ಎಂದು ತಿಳಿಸಿದರು.
ಇನ್ನು ಖಾದಿ ರಾಷ್ಟ್ರಧ್ವಜ ಖರೀದಿಸಿದ ಹೊನ್ಮನೆ ಮಾತನಾಡಿ, ಮನೆಮನೆಯಲ್ಲಿ ಧ್ವಜವಂದನೆಯನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ. ಈ ಹಬ್ಬವನ್ನು ಉತ್ತಮ ರೀತಿಯಲ್ಲಿ ಆಚರಿಸಲು ಖಾದಿ ಧ್ವಜ ಹಾರಿಸಬೇಕು ಅಂತ ಖಾದಿ ಖರೀದಿಸಿದೇವೆ. ಮಾರುಕಟ್ಟೆಯಲ್ಲಿ ಸಾಕಷ್ಟು ಪಾಲಿಸ್ಟರ್ ಧ್ವಜಗಳು ಬಂದಿವೆ. ಆದ್ರೆ ಪ್ಲಾಸ್ಟಿಕ್ ಬಾವುಟಗಳಲ್ಲಿ ಧ್ವಜಾರೋಹಣ ಮಾಡಿದ ಹಾಗೆ ಅನಿಸೋದಿಲ್ಲ ಖಾದಿ ಬಾವುಟ ಹಾರಿಸಿದರೆ ಮಾತ್ರ ಕಳೆ ಇರುತ್ತದೆ. ಖಾದಿ ನೇಯ್ದು ಮಾಡುವುದರಿಂದ ಸಹಜವಾಗಿ ಬೆಲೆ ಹೆಚ್ಚಿರುತ್ತದೆ. ಎಲ್ಲರೂ ಖಾದಿ ಧ್ವಜ ಖರೀದಿಸಿ ದೇಶದ ಹಿರಿಮೆಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡ್ತೇನೆ ಎಂದು ತಿಳಿಸಿದ್ದಾರೆ