ಕೂಗು ನಿಮ್ಮದು ಧ್ವನಿ ನಮ್ಮದು

ಭಾವನೆಗಳ ಸಂತೆಯಲ್ಲಿ

-ದೀಪಕ್ ಶಿಂಧೇ

ಈ ಬದುಕ ಸಂತೆಯಲ್ಲಿ ಭಾವನೆಗಳ ಸರಕನ್ನು
ಮಾರಾಟಕ್ಕೆ ಇಟ್ಟಿದ್ದೇನೆ.
ಹರಾಜು ಕೂಗುತ್ತಲೆ ಇದ್ದೇನೆ.
ಬೆಳಗಿನಿಂದ ಮದ್ಯಾಹ್ನವಾಗಿದೆ.
ಸಂಜೆಯಾಗುವದಷ್ಟೇ ಬಾಕಿ ಇದೆ.

ಬಣ್ಣ ಬಣ್ಣದ ಕನಸು
ನಿಷ್ಕಲ್ಮಷ ಮನಸು ಎಷ್ಟೆಲ್ಲ ವಿಧಗಳಿವೆ.
ಸತ್ಯದ ಲೇಪನ ಅಂಟಿಸಿದ ಸುಳ್ಳುಗಳು ಇಲ್ಲವಷ್ಟೇ.

ಯಾರು ಬೇಕಾದರೂ
ಕೇಳಬಹುದು ಮನಸಿಗೆ ಬಂದ ದರಕ್ಕೆ.
ಬೇಜಾರೆನೂ ಇಲ್ಲ ನನಗೆ
ಆದರೆ ಭಾವನೆಗಳು ಬಿಕರಿಯಾಗಬೇಕಷ್ಟೆ.

ಪೈಸೆಗಳಿಂದ ಹಿಡಿದು ರೂಪಾಯಿ ಲೆಕ್ಕದಲ್ಲಿ
ಎಷ್ಟು ಬೇಕಾದರೂ ಕೂಗಿಬಿಡಿ.
ಸುಖದ ಸರಕು ಕೊಂಡರೆ
ದುಃಖವನ್ನು ಉಚಿತವಾಗಿ ಹಂಚುತ್ತೇನೆ.

ಹೌದು.. ಈ ಬದುಕ ಸಂತೆಯಲ್ಲಿ
ಭಾವನೆಗಳ ಮಾರಾಟಕ್ಕೆ ಇಟ್ಟಿದ್ದೇನೆ.
ದುಃಖ ಕೊಳ್ಳುವ ಮನಸುಗಳು ಬೇಕಿಲ್ಲ ಬಿಡಿ.
ಹಂಚಿಕೊಳ್ಳುವ ಜೀವಗಳ ಹುಡುಕಿ
ಹೈರಾಣಾಗಿದ್ದೇನೆ ಅಷ್ಟೇ..

ಚೌಕಾಶಿ ಮಾಡುತ್ತಾರೆ ಬಹಳ ಜನ,
ತಿರಸ್ಕರಿಸಿ ತಿರುಗಿ ನೋಡದೆ ಹೋಗಿದ್ದಾರೆ
ಹಲವು ಜನ. ಕಾರಣ ಗೆದ್ದೆತ್ತಿನ ಬಾಲ ಹಿಡಿಯುವದು ರೂಢಿ ಇಲ್ಲ ನನಗೆ
ಸೋತವರ ಸೋಲಿಗೊಂದು ಸಾಂತ್ವನ ಹೇಳಿದ್ದೇನೆ ನೊಂದವರ ನೋವಿಗೆ ಹೆಗಲಾಗಿದ್ದೇನೆ ಅಷ್ಟೇ.

ಹೌದು ಈ ಬದುಕ ಸಂತೆಯಲ್ಲಿ
ಭಾವನೆಗಳ ಮಾರಾಟಕ್ಕೆ ಇಟ್ಟಿದ್ದೇನೆ.
ದುಡ್ಡು ಕಾಸಿನ ಬಾಬತ್ತೇನೂ ಇಲ್ಲ.
ಖಾಲಿ ಜೇಬಿನವರಿಗೂ ಹಂಚುತ್ತೇನೆ,
ಆದರೆ ಜತನದಿ ಕಾಯುವ ಮನಸ್ಸುಗಳಿರಬೇಕಷ್ಟೇ!

ಹೌದು ಈ ಬದುಕ ಸಂತೆಯಲ್ಲಿ
ಭಾವನೆಗಳ ಮಾರಾಟಕ್ಕೆ ಇಟ್ಟಿದ್ದೇನೆ.
ಸಂತೆ ಮುಗಿಯುವ ಮುನ್ನ
ಯಾರಾದರೂ ಅದಲು ಬದಲಿಯಾದರು
ಮಾಡಿಕೊಂಡಾರೆಂಬ ಭರವಸೆ ಇಟ್ಟಿದ್ದೇನೆ.

ಹೌದು ಈ ಬದುಕ ಸಂತೆಯಲ್ಲಿ
ಭಾವನೆಗಳ ಮಾರಾಟಕ್ಕೆ ಇಟ್ಟಿದ್ದೇನೆ
ಕಳೆದ ನಿನ್ನೆಯ ನೆನಪುಗಳಿವೆ ಬರುವ ನಾಳೆಯ ಭರವಸೆಗಳೂ ಇವೆ.

ಸಮಯ ಕಳೆದಂತೆಲ್ಲ
ನಂಬಿಕೆಯ ಕಂಬಗಳು ಕುಸಿದು
ನಾಜೂಕಿನ ಮುಖವಾಡಗಳು ಕಳಚುತ್ತಲೇ ಇವೆ.
ಅಸಲಿಯತ್ತು ಒಪ್ಪುವ ಜೀವಗಳು ಬೇಕಿವೆ ನನಗೆ
ಈ ಬದುಕ ಸಂತೆಯಲ್ಲಿ ಭಾವನೆಗಳ ಮಾರಾಟಕ್ಕೆ ಇಟ್ಟಿದ್ದೇನೆ.

error: Content is protected !!