ಗದಗ: ಬೈಕ್ ನಲ್ಲಿ ಅಕ್ರಮವಾಗಿ ಜಿಲಿಟಿನ್ ಟ್ಯೂಬ್ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಶಿರಹಟ್ಟಿ ಪೊಲೀಸರು ಬಂಧಿಸಿದ್ದಾರೆ. ಗದಗ ಜಿಲ್ಲೆ ಶಿರಹಟ್ಟಿ ಪೋಲಿಸರ ಭರ್ಜರಿ ದಾಳಿ ಇದಾಗಿದ್ದು, ಗದಗ ಜಿಲ್ಲೆಯ ಶೀತಾಲಹರಿ ಬಳಿ ಈ ಖದಿಮ ಸಿಕ್ಕಿಬಿದ್ದಿದ್ದಾನೆ. ಇನ್ನು ಶೀತಾಲಹರಿಯ ಬಳಿ ಇರುವ ಕಲ್ಲಿನ ಕ್ವಾರಿಗೆ ಇವುಗಳನ್ನು ಸಾಗಾಟ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಆರೋಪಿಯನ್ನು ಆಂಧ್ರ ಪ್ರದೇಶದ ಮೋಕ್ಸಗುಂಡಂ ಮೂಲದ ವ್ಯಕ್ತಿ ಶಿವರಡ್ಡಿ ಸುಬ್ಬಾರಡ್ಡಿ ತಮ್ಮನೇನೆ ಎಂದು ಗುರುತಿಸಲಾಗಿದೆ. ಸುಮಾರು 23 ಸಾವಿರ ರೂಪಾಯಿ ಮೌಲ್ಯದ ಸ್ಪೋಟಕ ವಸ್ತುಗಳು ಇವಾಗಿದ್ದು, 102 ಜಿಲಿಟಿನ್ ಟ್ಯೂಬ್, 21 ಎಲೆಕ್ಟ್ರಾನಿಕ್ ಡಿಟೊನೇಟರ್ ಹಾಗೂ ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ವಿನಯ ಟ್ರೇಡರ್ಸ್ ನಲ್ಲಿ ಸ್ಪೋಟಕಗಳ ಖರೀದಿ ಮಾಡಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಪರ್ಮಿಟ್ ಇಲ್ಲದೇ ಸ್ಪೋಟಕ ವಸ್ತುಗಳನ್ನು ನೀಡಿದ ವಿನಯ ಟ್ರೇಡರ್ಸ್ ಮೇಲೆ ಪ್ರಕರಣ ದಾಖಲು ಮಾಡಲು ಪೊಲೀಸರು ಮುಂದಾಗಿದ್ದಾರೆ. ಉಳಿದಂತೆ ಶಿರಹಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.