ಹುಬ್ಬಳ್ಳಿ: ಬಾಲ ಕಾರ್ಮಿಕನನ್ನು ಗೃಹ ಕಾರ್ಮಿಕನಾಗಿ ಕೆಲಸಕ್ಕೆ ನೇಮಿಸಿಕೊಂಡಿರುವ ದೂರಿನನ್ವಯ ಮೇ.26 ರಂದು ಹುಬ್ಬಳ್ಳಿಯ ಲಿಂಗರಾಜನಗರ ವ್ಯಾಪ್ತಿಯಲ್ಲಿ ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರ ಮನೆಯ ಮೇಲೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಹಠಾತ್ ದಾಳಿ ನಡೆಸಿದರು.
ಸಮಯದಲ್ಲಿ ಮಗು ಕೆಲಸ ಮಾಡುತ್ತಿರುವುದು ಕಂಡು ಬಂದಿತು. ಇದು ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ರ ಉಲ್ಲಂಘನೆಯಾಗಿದೆ.
14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಮತ್ತು 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ಯೋಗಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ ದಾಳಿಯಲ್ಲಿ ಸಿಕ್ಕಿರುವ ಬಾಲ ಕಾರ್ಮಿಕ ಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಸಹಾಯಕ ಕಾರ್ಮಿಕ ಆಯುಕ್ತರ ನಿರ್ದೇಶನದ ಮೇರೆಗೆ ಕೈಗೊಳ್ಳಲಾಗಿದೆ ಮತ್ತು ಈ ಕಾರ್ಯಾಚರಣೇಯ ನೇತೃತ್ವವನ್ನು ಮಾರಿಕಾಂಬಾ ಹುಲಕೋಟಿ ಕಾರ್ಮಿಕ ಅಧಿಕಾರಿ ಉಪ ವಿಭಾಗ-2, ಹುಬ್ಬಳ್ಳಿ ವಹಿಸಿಕೊಂಡಿದ್ದರು. ಈ ಪ್ರಕರಣವು ಅಶೋಕ ಓಡೆಯರ ಹಿರಿಯ ಕಾರ್ಮಿಕ ನಿರೀಕ್ಷಕರು 3ನೇ ವೃತ್ತ, ಹುಬ್ಬಳ್ಳಿ ಇವರ ಕಾರ್ಯವ್ಯಾಪ್ತಿಗೆ ಒಳಪಡುವುದರಿಂದ ಕೆಲಸಕ್ಕೆ ನೇಮಿಸಿಕೊಂಡ ಮನೆಯ ಮಾಲೀಕರ ವಿರುದ್ಧ ಪ್ರಕರಣವನ್ನು ದಾಖಲಿಸಲು ಕ್ರಮ ಕೈಗೊಂಡಿದ್ದಾರೆ.