-ದೀಪಕ್ ಶಿಂಧೇ
ದೀಪಾವಳಿ ಎಂದರೆ ದೀಪದ ಹಬ್ಬ. ದುರಂತವೆಂದರೆ ಮನೆಗಳನ್ನಷ್ಟೇ ಬೆಳಗುತ್ತಿದೆ ದೀಪ. ಝಗಮಗಿಸುತ್ತದೆ ತರಹೇವಾರಿಯಾಗಿ…
ಮನಸಿಗೆ ಇಳಿದ ಕತ್ತಲೆ ಮಾತ್ರ ಕರಗುತ್ತಲೇ ಇಲ್ಲ! ಹೀಗಾದರೆ ಈ ಬದುಕ ಕತ್ತಲೆಯ ಕಳೆಯುವದಾದರೂ ಹೇಗೆ??
ದೀಪಾವಳಿ ಮುಗಿದ ಮರುದಿನ ರಸ್ತೆಗೆ ಚದುರಿದ
ಬಣ್ಣ ಬಣ್ಣದ ಪಟಾಕಿ, ಸುಟ್ಟು ಕರಕಲಾದ ಕುಳ್ಳಿ, ಅನಾಥವಾಗಿ ಬಿದ್ದ ಸುರ ಸುರ ಬತ್ತಿ, ಯಾರದೋ ಮನೆಯಲ್ಲಿ ಮುಗಿದ ನಗೆಯ ಚಟಾಕಿ. ಮುಳ್ಳಿನ ಗಿಡದಲ್ಲಿ ಸಿಲುಕಿದ ಉಳ್ಳವರು ಹಾರಿಸಿ ಬಿಟ್ಟ ಆಕಾಶ ಬುಟ್ಟಿ. ಒಲವೆಂಬುದು ತೋರಿಕೆಗಷ್ಟೇ ಸೀಮಿತವಾಗಿದೆ. ಈ ಬದುಕ ಕತ್ತಲೆ ಕಳೆಯುವದಾದರೂ ಹೇಗೆ??
ಮತ್ತೆ ರಸ್ತೆಗೆ ಇಳಿವ ಖಾಲಿ ಹೊಟ್ಟೆ, ಭಿಕ್ಷುಕನಿಗೆ ತುಂಬಲಾರದ ಅದೇ ಖಾಲಿ ತಟ್ಟೆ. ಅದೆಷ್ಟು ಮಿನುಕು, ತಳಕು-ಬಳಕು. ಎಷ್ಟು ತೊಳೆದರೂ
ಸ್ವಚ್ಚವಾಗದ ಮನದ ಕೊಳಕು. ಹೀಗಾದರೆ ಈ ಬದುಕ ಕತ್ತಲೆಯ ಕಳೆಯುವದಾದರೂ ಹೇಗೆ??
ಮತ್ತದೆ ಕೊಂಕು ಮಾತುಗಳು. ಮೇಲಷ್ಟೆ ಶುಭಾಷಯ, ಬಾಯಿಮಾತಿನ ಹಾರೈಕೆಗಳು.
ತಪ್ಪದ ಬಿಕ್ಕಳಿಕೆ, ನೀಗದ ದಾಹಗಳು ಮತ್ತದೇ ಕನವರಿಕೆ. ಹೀಗಾದರೆ ಈ ಬದುಕ ಕತ್ತಲೆ ಕಳೆಯುವದಾದರೂ ಹೇಗೆ??
ತಪ್ಪು ನಮ್ಮದೇ ಮತ್ತೆ ಮತ್ತೆ ಎಣ್ಣೆಯ ಪಣತಿಯನ್ನಷ್ಟೇ ಹಚ್ಚಿದ್ದೇವೆ. ಹತ್ತಿಯ ಬತ್ತಿಗಳನಿಟ್ಟು ಬೆಂಕಿ ಕೊಟ್ಟಿದ್ದೇವೆ. ಹಿಡಿ ಒಲವನ್ನೆ ಈ ಪಾಪಿ ಜಗಕ್ಕೆಲ್ಲ ಹಂಚಬೇಕಿತ್ತು ಪ್ರೀತಿಯ ದೀಪಗಳ ಎದೆಯ ಗೂಡಿನಲ್ಲಿ ಹಚ್ಚ ಬೇಕಿತ್ತು. ಆದರೆ ಮರೆತು ಬಿಟ್ಟಿದ್ದೇವೆ. ಹೀಗಾದರೆ ಈ ಬದುಕ ಕತ್ತಲೆಯ ಕಳೆಯುವದಾದರೂ ಹೇಗೆ??
ಮರೆಯುವದು ರೂಢಿಯಾಗಿದೆ ನಮಗೆ. ರಾಮನಿದ್ದಲ್ಲಿ ರಾವಣನನ್ನು ಹೋಗಳುವ ಜನರಿದ್ದಾರೆ. ಜಾತಿಗಳ ಜಗಳ ಹಚ್ಚುತ್ತಾರೆ. ಸಂಶಯದ ಬೀಜ ಬಿತ್ತುತ್ತಾರೆ. ದುರಂತವೆಂದರೆ ನಾವು ನಮ್ಮನ್ನೇ ಮರೆತಿದ್ದೇವೆ. ಹೀಗಾದರೆ ಈ ಬದುಕ ಕತ್ತಲೆ ಕಳೆಯುವದು ಹೇಗೆ??
ಆರಿ ಹೋಗುವ ದೀಪ, ಹಾರಿ ಹೋಗುವ ಜೀವ.
ಶಾಶ್ವತವೆಂಬಂತೆ ಮತ್ತೆ ದ್ವೇಷ, ಸಿಟ್ಟು, ಸೆಡವುಗಳ ಸಾಕುತ್ತ ಎಡವಿದ ಜಾಗದಲ್ಲಿ ಎಡವುತ್ತಲೆ ಇದ್ದೇವೆ. ಹೇಳಿ ಈ ಬದುಕ ಕತ್ತಲೆಯ ಕಳೆಯುವದಾದರೂ ಹೇಗೆ??