ಕೂಗು ನಿಮ್ಮದು ಧ್ವನಿ ನಮ್ಮದು

ಅರಿಶಿಣ ಎಷ್ಟು ಉಪಯೋಗ: ಅದರ ಮೂಲ ಹೇಗೆ, ಎಲ್ಲಿ

-ಶ್ರೇಯಾ ಕುಂದಗೋಳ

ಅರಿಶಿಣಕ್ಕೆ ಹಲವು ಉತ್ತಮ ಗುಣಗಳಿವೆ. ಸಂಬಾರ್ ಜಿನಸಿ ಅಥವಾ ರುಚಿಕಾರಕ ಹೊಳಪಿನ ಬಣ್ಣ, ಕಾಂತಿವರ್ಧಕ ಹಲವು ಕಾಯಿಲೆಗಳಿಗೆ ಉಪಯುಕ್ತವಾದ ಔಷಧ. ಮುಖ್ಯವಾಗಿ ಇದನ್ನು ಸಂಬಾರ್ ಜಿನಸಿಯಾಗಿ ಬಳಸುತ್ತಾರೆ. ಉಳಿದ ಉಪಯೋಗಗಳಿಗೆ ಸ್ವಲ್ಪ ಮಾತ್ರ ಖರ್ಚಾಗುತ್ತದೆ. ಅರಿಶಿಣವನ್ನು ತರಕಾರಿ, ಮಾಂಸ ಮತ್ತು ಮೀನಿನ ಅಡುಗೆಗಳಿಗೆ ಬಳಸುತ್ತಾರೆ. ಅಲ್ಲದೆ ಬೆಣ್ಣೆ ಉಪ್ಪಿನಕಾಯಿಗಳು, ಸಾಸಿವೆ ಪುಡಿ ಮತ್ತು ಇತರ ಆಹಾರಗಳಿಗೆ ರುಚಿಕರವಾಗಿ ಮತ್ತು ಬಣ್ಣ ಕಟ್ಟಲು ಉಪಯೋಗಿಸುತ್ತಾರೆ. ಇದನ್ನು ಮದ್ಯಪಾನಗಳು, ಹಣ್ಣಿನ ರಸಗಳು, ಕೇಕುಗಳು ಮತ್ತು ಜಲ್ಲಿಗಳಲ್ಲಿ ಬಣ್ಣಕ್ಕಾಗಿ ಬಳಸುತ್ತಾರೆ. ಜಿನಸಿಗಳ ಉಪ್ಪು ಮತ್ತು ಪಿಷ್ಟ ಪದಾರ್ಥಗಳು ಸೇರಿರುವ ಕರ್ರಿ ಪೌಡರ್ ನಲ್ಲಿ ಇದು ಒಂದು ಮುಖ್ಯ ಪದಾರ್ಥ.

ಅರಶಿಣದಲ್ಲಿರುವ ತೈಲದಿಂದ ಅದು ಆಹಾರಗಳಿಗೆ ರುಚಿ ಕಟ್ಟುವುದಲ್ಲದೆ ಹಸಿವು ಉಂಟುಮಾಡಿ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ನಮ್ಮ ಖಾರದ ಅಡುಗೆಗಳಿಗೆ ಒಂದು ಚಿಟಕಿ ಅರಿಶಿಣ ಪುಡಿಯನ್ನು ಹಾಕುವುದರಿಂದ ಅವುಗಳಿಗೆ ಹಿತವಾದ ರುಚಿ, ವಾಸನೆ, ಬಣ್ಣ ಬರುತ್ತದೆ. ಹಿಂದೆ ಭಾರತದಲ್ಲಿ ಅರಿಶಿಣವನ್ನು ಉಣ್ಣೆ, ರೇಷ್ಮೆ ಮತ್ತು ಹತ್ತಿ ನೂಲುಗಳಿಗೆ ಹಳದಿ ಬಣ್ಣ ಕಟ್ಟಲು ಆ್ಯಸಿಡ್ ಬಾತ್ ನಲ್ಲಿ ಉಪಯೋಗಿಸಲಾಗುತ್ತಿತ್ತು. ಈಗಲೂ ಇದನ್ನು ಹತ್ತಿಗೆ ಬಣ್ಣ ಕಟ್ಟಲು ಉಪಯೋಗಿಸುತ್ತಾರೆ. ಈ ಬಣ್ಣವನ್ನು ಔಷಧಗಳು, ಮಿಠಾಯಿಗಳು, ಅಕ್ಕಿ ತಯಾರಿಕೆ ಮತ್ತು ಆಹಾರ ಕೈಗಾರಿಕೆಗಳಲ್ಲಿ ಬಳಸುತ್ತಾರೆ. ಅರಶಿಣದ ಹೆಚ್ಚು ಭಾಗವನ್ನು ಕುಂಕುಮದ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಅರಶಿಣದಲ್ಲಿ ಅದ್ದಿದ ಕಾಗದವನ್ನು ಕ್ಷಾರತ್ವವನ್ನು ಪರೀಕ್ಷಿಸಲು ಬ್ರಿಟಿಷ್ ಫಾರ್ಮಕೋಪಿಯಾದಲ್ಲಿ ಅಧಿಕೃತವಾಗಿ ಉಪಯೋಗಿಸುತ್ತಾರೆ.

ಅರಿಶಿಣದಿಂದ ತಯಾರಿಸಿದ ತೆಳುವಾದ ಮಧ್ಯಾರ್ಕವು ಕಂದು ಮತ್ತು ಹಳದಿ ದ್ರವದಲ್ಲಿ ಫ್ಲೋರಸೆನ್ಸ್ ತೋರಲು ಉಪಯೋಗವಾಗುತ್ತದೆ. ಅರಿಶಿಣಕ್ಕೆ ಅದರಲ್ಲಿರುವ ಆಂಟಿಆಕ್ಸಿಡೆಂಟ್ ಗುಣವಿರುತ್ತದೆ. ಕರ್ ಕ್ಯುಮ್ ಲಾಂಗ್ ಲಿನ್ ಅಥವಾ ಕರ್ಕ್ಯೂಮಿನ್ ಡೆಮೋಸ್ಟಿಕ್ ವಾಲ್ ಎಂಬುದು ಅರಶಿಣದ ಶಾಸ್ತ್ರೀಯ ಹೆಸರು. ಇದಕ್ಕೆ ಭಾರತದ ವಿವಿಧ ಭಾಷೆಗಳಲ್ಲಿ ಹಲದಿ, ಹಲ್ದಿ, ಹಲೂದ್, ಪತ್ರಾಸ್, ಹಲ್ದರ್, ಹರದ್, ಮಂಜಲ್, ಹಲೆದ್, ಹಲದ್, ಹರಿದ್ರ, ಪಸಪು, ಹಳದಿ ಮುಂತಾದ ಹೆಸರುಗಳಿವೆ. ಭಾರತದ ಬಹು ಪ್ರಾಚೀನ ಮುಖ್ಯ ಸಂಬಾರ ಜಿನಸಿ ಹಿಂದೂಗಳು ಇದನ್ನು ಪವಿತ್ರ ಎಂದು ಪರಿಗಣಿಸಿ ಉತ್ಸವ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಉಪಯೋಗಿಸುತ್ತಾರೆ. ಅರಿಶಿಣದ ಸಸ್ಯ 60- 90 ಸೆಂಟಿಮೀಟರ್ ಎತ್ತರದ ಸರ್ವಕಾಲಿಕ ಗಿಡ ಇದರ ದಂಟು ಚಿಕ್ಕದಾಗಿ ಎಲೆಗಳು ಗೊಂಚಲಾಗಿರುತ್ತವೆ.

ಇದಕ್ಕೆ ಬಹುಶಃ ಭಾರತ ಮತ್ತು ಚೀನಾ ತವರು. ಈಗ ಇದನ್ನು ಉಷ್ಣವಲಯದಲ್ಲಿ ಸಾಗುವಳಿ ಮಾಡುತ್ತಾರೆ. ಶ್ರೀಲಂಕಾ ಮತ್ತು ಇಂಡೋನೇಷಿಯಾದಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ. ಪ್ರಪಂಚದ ಎಲ್ಲಾ ಕಡೆಗಿಂತ ಭಾರತದಲ್ಲಿ ಬೆಲೆ ಹೆಚ್ಚಾಗಿರುವುದು. ಅರಿಶಿಣ ಬೆಳೆಯುವ ಮುಖ್ಯ ಪ್ರಾಂತ್ಯಗಳೆಂದರೆ ಆಂಧ್ರಪ್ರದೇಶ, ಮಹಾರಾಷ್ಟ್ರ, ಒರಿಸ್ಸಾ, ತಮಿಳುನಾಡು, ಕರ್ನಾಟಕ, ಮತ್ತು ಕೇರಳ. ಭೂಮಿಯಿಂದ ಅಗೆದು ತೆಗೆದ ಅರಿಶಿನದ ಬೇರು ಕಾಂಡಗಳನ್ನು ಸರಿಯಾಗಿ ಸಂಸ್ಕರಿಸಿದ ಮೇಲೆಯೇ ಅದರ ಉತ್ತಮ ಹಳದಿ ಬಣ್ಣ ಮತ್ತು ವಿಶಿಷ್ಟ ಸುವಾಸನೆ ಬರುವುದು. ಗಡ್ಡೆಗಳು ಮತ್ತು ಉದ್ದವಾದ ಅರಿಶಿಣದ ಕೊಂಬುಗಳನ್ನು ಬೇರೆ ಬೇರೆಯಾಗಿ ನೀರಿನಲ್ಲಿ ಅರ್ಧ ಮುಕ್ಕಾಲು ಗಂಟೆ ಕುದಿಸುವರು. ನೂರೆ ಮತ್ತು ಬಿಳಿ-ಹೊಳೆ ಬರುವವರೆಗೆ ಇದು ನಡೆಯುತ್ತದೆ. ನಂತರ ನೀರು ತೆಗೆದು ಅರಿಶಿಣವನ್ನು ಅದು ಒಣಗಿ ಗಟ್ಟಿಯಾಗುವವರೆಗೆ ಹತ್ತು ಹದಿನೈದು ದಿನಗಳು ಬಿಸಿಲಿನಲ್ಲಿ ಹರಡಿ ಒಣಗಿಸುತ್ತಾರೆ.

ಈ ಹದ ಬಂದಾಗ ಕೊಂಬುಗಳನ್ನು ಶುಚಿ ಮಾಡಿ ಕೈಯಿಂದ ಅಥವಾ ವಿದ್ಯುತ್ತಿನಿಂದ ತಿರುಗುವ ಡ್ರಮ್ಮುಗಳಲ್ಲಿ ಹಾಕಿ ಮೆರಗು ಕೊಡುವರು. ಹಿಂದೆ ಅರಿಶಿಣವನ್ನು ಕುದಿಸಿದಾಗ ಕ್ಷಾರಗುಣ ಕೊಡಲು ನೀರಿಗೆ ಸಗಣಿ ಹಾಕಿ ತೆಗೆದ ಮೇಲೆ ಕೊಂಬುಗಳಿಗೆ ಕೃತಕ ಬಣ್ಣ ಕಟ್ಟಲು ಲೆಡ್ ಕ್ರೊಮೇಟ್ ಎಂಬ ನಂಜಿನ ರಸಾಯನವನ್ನು ಬಳಸುತ್ತಿದ್ದರು. ಈಗ ಇದಕ್ಕೆ ಸರಳವಾದ ಮತ್ತು ಆರೋಗ್ಯಕರ ವಿಧಾನ ಕಂಡು ಹಿಡಿಯಲಾಗಿದೆ. ಕೊಂಬುಗಳನ್ನು ಸುಣ್ಣದ ತಿಳಿ ನೀರು ಅಥವಾ ಅಡುಗೆ ಸೋಡಾ ನೀರಿನಲ್ಲಿ ಕುದಿಸುವರು. ನೀರಿನಲ್ಲಿ 20 ಗ್ರಾಂ ಸೋಡಿಯಂ ಮತ್ತು 20 ಗ್ರಾಂ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಬೇರುಗಳಿಗೆ ಹಾಕುವುದರಿಂದ ಬೇಕಾದ ಹಳದಿ ಬಣ್ಣವು ಕಟ್ಟುತ್ತದೆ. ಈಗ ಎಲ್ಲರೂ ಹೊಸ ವಿಧಾನವನ್ನು ಬಳಸುವವರು. ಅರಶಿಣದ ಮುಖ್ಯ ಗುಣಗಳು. ಅದರ ಹೊರನೋಟ, ಬಣ್ಣ, ಪಕ್ಷದ, ತೂಕ, ಉದ್ದ ಮತ್ತು ದಪ್ಪ ಒಳಭಾಗದ ಬಣ್ಣದ ಗಾಢತ್ವ ಮತ್ತು ವಾಸನೆ ಮುಂತಾದವುಗಳನ್ನು ಅವಲಂಬಿಸಿದೆ.

ಬೇರೆ ಬೇರೆ ಪ್ರದೇಶಗಳಲ್ಲಿ ಬೆಳೆಯುವ ಅರಿಶಿಣಕ್ಕೆ ಬೇರೆ ಬೇರೆ ಹೆಸರುಗಳು ಇರುತ್ತದೆ. ಇದರಲ್ಲಿ ಸುಮಾರು ಹದಿನಾರು‌ ಬಗೆಗಳನ್ನು ಕಾಣಬಹುದು. ಅಲಪ್ಪಿ ಅರಿಶಿಣವು ಪ್ರಪಂಚದಲ್ಲಿ ಅತ್ಯುತ್ತಮವೆಂದು ಪ್ರಸಿದ್ಧವಾಗಿದೆ. ಇದರಲ್ಲಿ ಕರ್ಕ್ಯೂಮಿನ್ ಬಣ್ಣ ಪದಾರ್ಥವು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಪುಡಿಮಾಡಿದ ಅರಿಶಿಣ ಕೊಂಬುಗಳನ್ನು ಬಟ್ಟಿಗೆ ಹಾಕಿದಾಗ ಹಳದಿ ಕಿತ್ತಳೆ ಬಣ್ಣದ ಅರಶಿಣದ ವಾಸನೆಯುಳ್ಳ ಒಮ್ಮೊಮ್ಮೆ ಫ್ಲೋರೆಸೆನ್ಸ್ ತೋರಿಸುವ ತೈಲ ಬರುತ್ತದೆ. ಅರಿಶಿಣದಿಂದ ದ್ರಾವಣದ ಮೂಲಕ ಸಾರ ತೆಗೆದು, ನಂತರ ನಿರ್ವಾತದಲ್ಲಿ ಸಾಂದ್ರೀಕರಿಸಿದ ರಿಂದ ಅರಶಿಣದ ತೈಲರಾಳವನ್ನು ಪಡೆಯುತ್ತಾರೆ. ಮಂದವಾದ ದ್ರವ ಘನರೂಪದ ಈ ತೈಲರಾಳವು ಅರಶಿಣದ ಚಂಚಲ ತೈಲವನ್ನು ಮತ್ತು ಇಂಗದ ರುಚಿಕಾರಕ ಮತ್ತು ಬಣ್ಣದ ಪದಾರ್ಥಗಳನ್ನು ಸಾಂದ್ರೀಕರಿಸಿದ ರೂಪದಲ್ಲಿ ಹೊಂದಿರುತ್ತದೆ. ಸಾಂಬಾರ್ ಜಿನಸಿಯ ಪಿಷ್ಟ ಮತ್ತು ನಾರು ಮುಂತಾದವು ಇದರಲ್ಲಿ ಸೇರುವುದಿಲ್ಲ. ತೈಲರಾಳಕ್ಕೆ ಹೊರ ದೇಶದ ಆಹಾರ ಮತ್ತು ಔಷಧ ಕೈಗಾರಿಕೆಗಳಲ್ಲಿ ಹೆಚ್ಚು ಬೇಡಿಕೆಯಿದೆ.

error: Content is protected !!