ಲಕ್ನೋ: ಕರ್ನಾಟಕದ ಉಡುಪಿಯಿಂದ ಆರಂಭವಾದ ಹಿಜಾಬ್ ವಿವಾದ ಈಗ ಉತ್ತರ ಪ್ರದೇಶದ ಅಲಿಗಢ ಕಾಲೇಜಿನಲ್ಲೂ ಪ್ರತಿಧ್ವನಿಸಿದೆ. ಅಲಿಗಢ ಧರ್ಮ ಸಮಾಜ ಕಾಲೇಜು ಸಮವಸ್ತ್ರವನ್ನು ಕಡ್ಡಾಯಗೊಳಿಸಿ ಆದೇಶ ಪ್ರಕಟಿಸಿದೆ. ಕಾಲೇಜು ನಿಗದಿ ಪಡಿಸಿದ ಸಮವಸ್ತ್ರವನ್ನೇ ಎಲ್ಲ ವಿದ್ಯಾರ್ಥಿಗಳು ಧರಿಸಬೇಕು ಎಂದು ಹೇಳಿದೆ.
ಹಿಜಾಬ್ ಇಲ್ಲ ಕೇಸರಿ ವಸ್ತ್ರವನ್ನು ಧರಿಸಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ತರಗತಿಗೆ ಪ್ರವೇಶ ನೀಡುವುದಿಲ್ಲ ಎಂದು ಧರ್ಮ ಸಮಾಜ ಕಾಲೇಜು ಆಡಳಿತ ಮಂಡಳಿ ಗುರುವಾರ ನೋಟಿಸ್ ಬೋರ್ಡ್ನಲ್ಲಿ ಸೂಚನೆಯನ್ನು ಪ್ರಕಟಿಸಿದೆ.
ಕಳೆದ ವಾರ ಉಡುಪಿ ಕಾಲೇಜಿನ ವಿದ್ಯಾರ್ಥಿಗಳನ್ನು ಬೆಂಬಲಿಸಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ರು. ಹಿಜಾಬ್ ದಬ್ಬಾಳಿಕೆಯ ಸಂಕೇತವಲ್ಲ, ಅದು ಸ್ವಾತಂತ್ರ್ಯದ ಸಂಕೇತವಾಗಿದೆ. ನಿಮ್ಮ ಮೊಬೈಲ್ ಅನ್ನು ಸುರಕ್ಷಿತವಾಗಿರಿಸಲು ನೀವು ಅದನ್ನು ಮುಚ್ಚುತ್ತೀರಿ. ಅಂತೆಯೇ, ನಾವು ಸುರಕ್ಷತೆಗಾಗಿ ಹಿಜಾಬ್‌ನಿಂದ ನಮ್ಮನ್ನು ಮುಚ್ಚಿಕೊಳ್ಳುತ್ತೇವೆ ಎಂದು ಘೋಷಣೆಗಳನ್ನು ವಿದ್ಯಾರ್ಥಿಗಳು ಕೂಗಿದ್ರು.
ಪ್ರತಿಭಟನೆ ನಡೆದ ಬೆನ್ನಲ್ಲೇ ಸೋಮವಾರ ಹಲವು ವಿದ್ಯಾರ್ಥಿಗಳು ಕೇಸರಿ ಶಾಲನ್ನು ಧರಿಸಿ ತರಗತಿಗೆ ಆಗಮಿಸಿದ್ರು. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸಲು ಆದೇಶ ಪ್ರಕಟಿಸಬೇಕೆಂದು ಮನವಿಯನ್ನು ಸಹ ಮಾಡಿದ್ರು. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯುವ ಸಮಯದಲ್ಲೇ ಈ ವಿಚಾರ ಪ್ರತಿಧ್ವನಿಸಿದೆ. ಫೆಬ್ರವರಿ ಹತ್ತರಂದು ನಡೆದ ಮೊದಲ ಹಂತದ ಸಮಯದಲ್ಲೇ ಅಲಿಗಢದಲ್ಲಿ ಚುನಾವಣೆ ನಡೆದಿದೆ.