ರಾಮನಗರ: ಹಿಜಾಬ್ ವಿವಾದದ ಹಿನ್ನೆಲೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. ಬುಧವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಿಯೇ ತರಗತಿಗಳಿಗೆ ಹೋಗಲು ವಿದ್ಯಾರ್ಥಿನಿಯರು ಗಲಾಟೆ ಮಾಡಿದ್ರು. ಹಾಗಾಗಿ ಮುನ್ನೆಚರಿಕಾ ದೃಷ್ಟಿಯಿಂದ ನಗರದ ಪ್ರಥಮ ದರ್ಜೆ ಕಾಲೇಜಿಗೆ ತಾತ್ಕಾಲಿಕವಾಗಿ ರಜೆ ಘೋಷಿಸಲಾಗಿತ್ತು. ಜೊತೆಗೆ ಮುಂದಿನ ಆದೇಶದವರೆಗೂ ಆನ್‍ಲೈನ್ ಕ್ಲಾಸ್ ನಡೆಸುವಂತೆ ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್ ಆದೇಶ ಮಾಡಿದ್ದರು.
ಆನ್‍ಲೈನ್ ಕ್ಲಾಸ್ ಬಗ್ಗೆ ಕಾಲೇಜು ಆಡಳಿತ ಮಂಡಳಿಯು ಯಾವುದೇ ರೀತಿಯ ಮಾಹಿತಿಯನ್ನು ನೀಡಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಈಗಾಗಲೇ ನಮಗೆ ಯಾವುದೇ ಪಾಠಗಳು ಪೂರ್ಣಗೊಂಡಿಲ್ಲ. ಕೋವಿಡ್ ಕಾರಣದಿಂದಾಗಿ ಪಾಠಗಳು ಸರಿಯಾಗಿ ನಡೆದಿರಲಿಲ್ಲ. ಈಗ ಮತ್ತೆ ಆನ್‍ಲೈನ್ ಕ್ಲಾಸ್ ಎನ್ನುತ್ತಿದ್ದಾರೆ. ಹೀಗಾದ್ರೆ ನಮ್ಮ ವಿದ್ಯಾಭ್ಯಾಸ ಹೇಗೆಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.