ಕೂಗು ನಿಮ್ಮದು ಧ್ವನಿ ನಮ್ಮದು

ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಗೆದ್ದ ಬಳಿಕ ತಾಯಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ

ಗಾಂಧಿನಗರ: ಪಂಚರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇದಾದ ನಂತರ ಪ್ರಧಾನಿ ಮೋದಿ ಅವರು ತಮ್ಮ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ. ನರೇಂದ್ರ ಮೋದಿ ಅವರು ಎರಡು ದಿನದ ಗುಜರಾತ್ ಪ್ರವಾಸದಲ್ಲಿದ್ದಾರೆ. ಈ ವೇಳೆ ಗಾಂಧಿನಗರದಲ್ಲಿ ತಮ್ಮ ತಾಯಿಯನ್ನು ಭೇಟಿಯಾದರು. ತಾಯಿ ಆಶೀರ್ವಾದವನ್ನು ಪಡೆದು ಜೊತೆಯಲ್ಲಿ ಕುಳಿತು ರಾತ್ರಿಯ ಭೋಜನ ಸವಿದಿರುವ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

ಅಹಮದಾಬಾದ್‍ನಲ್ಲಿ ರೋಡ್‍ಶೋ ಮುಗಿಸಿ ಗುಜರಾತ್ ಪಂಚಾಯತ್ ಮಹಾಸಮ್ಮೇಳನದಲ್ಲಿ ಭಾಷಣ ಮಾಡಿದ ಮೋದಿ ಅವರು ನಂತರ ಗಾಂಧಿನಗರಕ್ಕೆ ಬಂದು ತಮ್ಮ ತಾಯಿ ಹೀರಾ ಬೆನ್ ಅವರನ್ನು ಭೇಟಿಯಾಗಿದ್ದಾರೆ. ಮೋದಿಗೆ ಅವರ ತಾಯಿ ಶುಭಾಶಯ ಕೋರುವುದು, ಆಶೀರ್ವಾದ ಪಡೆಯುವುದನ್ನು ನಾವು ಫೋಟೋದಲ್ಲಿ ನೋಡಬಹುದಾಗಿದೆ. ಮತ್ತೊಂದು ಚಿತ್ರದಲ್ಲಿ ಮೋದಿ ಮತ್ತು ಅವರ ತಾಯಿ ಇಬ್ಬರೂ ಡೈನಿಂಗ್ ಟೇಬಲ್‍ನಲ್ಲಿ ಕುಳಿತು ಒಟ್ಟಿಗೆ ರಾತ್ರಿಯ ಊಟವನ್ನು ಮಾಡಿದ್ದಾರೆ.
ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಹಾಗೂ ಗೋವಾದಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಗೆಲುವು ದಾಖಲಿಸಿದೆ.

ಉತ್ತರಪ್ರದೇಶದಲ್ಲಿ 403 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ 273 ಸ್ಥಾನ ಗಳಿಸುವ ಮೂಲಕ ಭರ್ಜರಿ ಜಯ ದಾಖಲಿಸಿದೆ. ಪಕ್ಷವು ತನ್ನ ಮತಗಳ ಹಂಚಿಕೆಯಲ್ಲಿ 39.67% ರಿಂದ 41.29% ಕ್ಕೆ ನಿರ್ಣಾಯಕ ಏರಿಕೆ ಕಂಡಿದೆ. ಯುಪಿ ಜೊತೆಗೆ ಉತ್ತರಾಖಂಡದಲ್ಲಿ ಬಿಜೆಪಿ ಐತಿಹಾಸಿಕ ಸತತ 2ನೇ ಅವಧಿಯನ್ನು ಗೆದ್ದುಕೊಂಡಿದೆ. ಗೋವಾದಲ್ಲಿ ಕಾಂಗ್ರೆಸ್‍ನ್ನು ಸೋಲಿಸಿದೆ. ಹಾಗೂ ಮಣಿಪುರದಲ್ಲಿ ಸ್ಪಷ್ಟ ಬಹುಮತವನ್ನು ಗಳಿಸಿದೆ.

error: Content is protected !!