ಈ ವರ್ಷ ಚಳಿಗಾಲ ಜೋರಾಗಿರಲಿದೆ ಅಂತ ಶುರುವಿನಲ್ಲೇ ಗೊತ್ತಾಗುತ್ತಿದೆ. ಚಳಿಗಾಲದಲ್ಲಿ ಶರೀರ ಸೋಮಾರಿಯಾಗುತ್ತದೆ. ಬೇಗನೆ ಏಳುವುದಿಲ್ಲ, ವಾಕಿಂಗ್ ಮಾಡುವುದಿಲ್ಲ. ಆಗಾಗ ಬಿಸಿಬಿಸಿ ಕಾಫೀ ಟೀ ಸೇವಿಸುತ್ತೇವೆ. ಬಜ್ಜಿ ಬೋಂಡಾ ಕುರುಕಲು ಹೆಚ್ಚು ಸೇವಿಸುತ್ತೇವೆ. ಬಿಸಿಬಿಸೀ ನೀರಿನಲ್ಲಿ ಸ್ನಾನ ಮಾಡುತ್ತೇವೆ. ಆದರೆ ಇವೆಲ್ಲವೂ ಒಳ್ಳೆಯದೇ? ಚಳಿಗಾಲದಲ್ಲಿ ನಾವು ಮಾಡುವ ಹಲವು ತಪ್ಪುಗಳು ನಮ್ಮ ದೇಹದ ಹದ ಕೆಡಿಸಬಹುದು. ಅಂಥ ಕೆಲವು ಇಲ್ಲಿವೆ ನೋಡಿ.
- ಅತಿಯಾಗಿ ಕಾಫಿ ಟೀ ಸೇವನೆ: ಚಳಿ ಹೋಗಲಾಡಿಸಲು ಬೆಳಗ್ಗೆ ವಾಕಿಂಗ್ ಮೊದಲೊಮ್ಮೆ, ವಾಕಿಂಗ್ ಮುಗಿಸಿ ಒಮ್ಮೆ, ತಿಂಡಿಯ ಜೊತೆಗೊಮ್ಮೆ, ಮಧ್ಯಾಹ್ನ, ಸಂಜೆ ಹೀಗೆಲ್ಲಾ ಕಾಫಿ- ಟೀ ಸೇವಿಸುವವರಿರುತ್ತಾರೆ. ಸೇವಿಸಿದಾಗ ಒಮ್ಮೆ ಕಾಫಿಯಲ್ಲಿರುವ ಕೆಫೀನ್ ನಿಮಗೆ ಚೈತನ್ಯ ನೀಡುತ್ತದೆ. ಆದರೆ ಅದು ಅತಿಯಾದರೆ, ದೇಹಕ್ಕೆ ಹಾನಿಯಾಗಬಹುದು.
- ಹೆಚ್ಚು ಬಿಸಿ ನೀರಿನ ಸ್ನಾನ ಚಳಿಗಾಲದಲ್ಲಿ ಬಿಸಿನೀರಿನ ಸ್ನಾನ ಮಾಡುವುದು ಸಹಜ. ಆದರೆ ಈ ನೀರಿನ ಉಷ್ಣತೆ 32 ಡಿಗ್ರಿ ಸೆಲ್ಸಿಯಸ್‌ವರೆಗೆ ಮಾತ್ರ ಇರಬೇಕು ಎಂದು ಸಂಶೋಧನೆಗಳು ಹೇಳುತ್ತವೆ. ಇದಕ್ಕಿಂತ ಹೆಚ್ಚು ಬಿಸಿನೀರಿನ ಸ್ನಾನ ಮಾಡಿದರೆ ಚರ್ಮ ಮತ್ತು ಕೂದಲಿಗೆ ಹಾನಿಯಾಗುತ್ತದೆ. ಚರ್ಮದ ಸೋಂಕುಗಳು ಕಾಡಬಹುದು. ಹೆಚ್ಚು ಬಿಸಿನೀರಿನಿಂದ ಚರ್ಮದ ಅಂಗಾಂಶಗಳು ಹಾನಿಗೀಡಾಗಬಹುದು. ಚರ್ಮ ಮುದುಡಿಕೊಳ್ಳಬಹುದು, ಸುಕ್ಕುಗಳು ಉಂಟಾಗಬಹುದು.
- 3. ಅತಿಯಾಗಿ ಕೋಲ್ಡ್ ಕ್ರೀಂ ಬಳಕೆ: ಚಳಿಗಾಲದಲ್ಲಿ ಚರ್ಮದ ಶುಷ್ಕತೆಯನ್ನು ತಡೆಗಟ್ಟಲು ನೀವು ಪದೇ ಪದೇ ಎಣ್ಣೆ ಅಥವಾ ಜಿಗುಟಾದ ಕ್ರೀಮ್ ಅನ್ನು ಚರ್ಮಕ್ಕೆ ಹಚ್ಚುತ್ತಿದ್ದೀರಾ? ಅದು ಧೂಳು ಮತ್ತು ಸೂಕ್ಷ್ಮಜೀವಿಗಳನ್ನು ಆಕರ್ಷಿಸಿ ನಿಮ್ಮ ಚರ್ಮವನ್ನು ಹಾನಿಗೊಳಿಸುತ್ತದೆ.
- ತುಂಬಾ ದಪ್ಪದ ಬಟ್ಟೆ ಧರಿಸುವುದು: ದೇಹವನ್ನು ಬೆಚ್ಚಗಿಡಲು ಒಂದು ಜರ್ಕಿನ್ ಧರಿರಬಹುದು. ಆದರೆ ಕೆಲವರು ಒಂದರ ಮೇಲೊಂದರಂತೆ ಹಲವು ಬಟ್ಟೆಗಳನ್ನು ಧರಿಸುತ್ತಾರೆ. ಇದರಿಂದ ದೇಹ ತುಂಬಾ ಬಿಸಿಯಾಗುತ್ತದೆ. ನಮ್ಮ ದೇಹದ ಇಮ್ಯುನಿಟಿ ವ್ಯವಸ್ಥೆಯೇ ಶೀತದ ಬಾಧೆ ತಡೆಯಲು ಸಾಕಾಗುತ್ತದೆ. ಇದು ದೇಹವನ್ನು ಸೋಂಕುಗಳಿಂದ ಸುರಕ್ಷಿತವಾಗಿರಿಸುತ್ತದೆ. ಆದರೆ ದೇಹ ಹೆಚ್ಚು ಬಿಸಿಯಾದಾಗ ಪ್ರತಿರೋಧ ವ್ಯವಸ್ಥೆಯು ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ.
- 5. ನೀರು ಸೇವಿಸದಿರುವುದು: ಚಳಿಗಾಲದಲ್ಲಿ ಹೆಚ್ಚು ಬಾಯಾರಿಕೆಯಾಗುವುದಿಲ್ಲ, ಹೀಗಾಗಿ ಜನ ನೀರು ಕುಡಿಯುವುದನ್ನು ನಿಲ್ಲಿಸುತ್ತಾರೆ. ಈ ರೀತಿ ಮಾಡುವುದು ದೇಹಕ್ಕೆ ಒಳ್ಳೆಯದಲ್ಲ. ಇದರಿಂದ ದೇಹ ನಿರ್ಜಲೀಕರಣಗೊಳ್ಳಲು ಆರಂಭಿಸುತ್ತದೆ. ಮೂತ್ರಪಿಂಡ ಮತ್ತು ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳು ಉಂಟಾಗಬಹುದು.
- ಮಿತಿ ಮೀರಿದ ಆಹಾರ: ಚಳಿ ಹೆಚ್ಚಾದ ತಕ್ಷಣ ಹೆಚ್ಚು ತಿನ್ನಲಾರಂಭಿಸುತ್ತೇವೆ. ಈ ಋತುವಿನಲ್ಲಿ ದೇಹದ ಕ್ಯಾಲೋರಿಗಳು ಹೆಚ್ಚು ಖರ್ಚಾಗುವುದೆ ಇದಕ್ಕೆ ಕಾರಣ. ಇದಕ್ಕಾಗಿ ನಾವು ಅಗತ್ಯಕ್ಕಿಂತ ಹೆಚ್ಚು ತಿನ್ನಲು ಪ್ರಾರಂಭಿಸುತ್ತೇವೆ. ಜತೆಗೆ ಎಣ್ಣೆತಿಂಡಿ ಸೇವನೆಯನ್ನೂ ಮಾಡುತ್ತೇವೆ. ಇದರಿಂದ ಆರೋಗ್ಯಕ್ಕೆ ಹಾನಿ ಖಚಿತ.
- ಅತಿಯಾದ ನಿದ್ರೆ: ಚಳಿಗಾಲದಲ್ಲಿ ಬೆಚ್ಚಗಿನ ಹಾಸಿಗೆಯಲ್ಲಿ ಸಮಯ ಕಳೆಯುವುದು ಆನಂದಕರ. ಮಲಗಿದ ತಕ್ಷಣ ನಿದ್ರೆ ಬರಬಹುದು. ಬೆಳಿಗ್ಗೆ ತಡವಾಗಿ ಏಳುತ್ತೇವೆ. ಮಧ್ಯಾಹ್ನವೂ ನಿದ್ದೆ ಮಾಡುತ್ತೇವೆ. ಆದರೆ ಇದೆಲ್ಲಾ ದೇಹದ ನಿಗದಿತ ಜೈವಿಕ ಚಕ್ರವನ್ನು ಏರುಪೇರು ಮಾಡುತ್ತದೆ. ಚಳಿಗಾಲದ ಮುಗಿದ ಬಳಿಕದ ದಿನಚರಿ ಇದರಿಂದ ಕಷ್ಟವಾಗಬಹುದು.