ಕೂಗು ನಿಮ್ಮದು ಧ್ವನಿ ನಮ್ಮದು

ಅಬಕಾರಿ ಇಲಾಖೆಯ ಅಕ್ರಮ ಬಯಲು: ತನಿಖೆಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಗ್ರಹ

ಬೆಂಗಳೂರು: ನೀರಾವರಿ ಇಲಾಖೆಯ ರೂ.20,000 ಕೋಟಿ ಯೋಜನೆಯಲ್ಲಿ 10% ಕಿಕ್ ಬ್ಯಾಕ್ ಪಡೆಯಲಾಗಿದೆ ಎಂಬ ಆರೋಪ ಜೀವಂತವಾಗಿರುವಾಗಲೇ ಅಬಕಾರಿ ಇಲಾಖೆಯ ಅಕ್ರಮ ಬಯಲಾಗಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು, ನೀರಾವರಿ ಇಲಾಖೆಯ 20,000 ಕೋಟಿ ಯೋಜನೆಯಲ್ಲಿ 10% ಕಿಕ್ ಬ್ಯಾಕ್ ಪಡೆಯಲಾಗಿದೆ ಎಂಬ ಆರೋಪ ಜೀವಂತವಾಗಿರುವಾಗಲೇ ಅಬಕಾರಿ ಇಲಾಖೆಯ ಅಕ್ರಮ ಬಯಲಾಗಿದೆ. ಅಬಕಾರಿ ಸಚಿವರಿಗೆ ಪ್ರತಿ ಜಿಲ್ಲೆಯಿಂದ ₹5 ಲಕ್ಷ ಹೋಗಬೇಕು ಎಂಬ ಅಧಿಕಾರಿಗಳ ಸಂಭಾಷಣೆ ಬಹಿರಂಗವಾಗಿದೆ. ಹಣ ಖರ್ಚು ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಹಣ ಲೂಟಿ ಮಾಡುವಲ್ಲಿ ನಿರತವಾಗಿದೆ ಎಂದು ಆರೋಪಿಸಿದ್ದಾರೆ. ಆಡಿಯೊ ಬಹಿರಂಗವಾಗುತ್ತಲೇ ಅಬಕಾರಿ ಇಲಾಖೆಯ ಮೂವರು ಇನ್ಸ್ಪೆಕ್ಟರ್ಗಳನ್ನು ಅಮಾನತು ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೊಟ್ಟಿರಬಹುದಾದವರಿಗೆ ಶಿಕ್ಷೆ ಕೊಟ್ಟ ಮೇಲೆ ಈಸ್ಕೋಂಡಿರಬಹುದಾದವರಿಗೆ ಶಿಕ್ಷೆ ಇಲ್ಲ ಏಕೆ? ಅಧಿಕಾರಿಗಳ ಮೇಲಿನ ಕ್ರಮ ಭ್ರಷ್ಟಾಚಾರಕ್ಕಾಗಿಯೋ ಅಥವಾ ಸರ್ಕಾರದ ಬಂಡವಾಳ ಬಯಲು ಮಾಡಿದರು ಎಂಬ ಕಾರಣಕ್ಕೋ? ಎಂದು ಪ್ರಶ್ನಿಸಿದ್ದಾರೆ. 2 ಸಾವಿರ ಕೋಟಿ ಕಿಕ್ ಬ್ಯಾಕ್ ಪ್ರಕರಣವನ್ನು ತನಿಖೆಗೆ ಒಳಪಡಿಸುವಂತೆ ಈಗಾಗಲೇ ನಾನು ಆಗ್ರಹಿಸಿದ್ದೇನೆ. ಅದರಲ್ಲಿನ ಬಿಎಸ್ವೈ ಕುಟುಂಬದ ಪಾತ್ರದ ಬಗ್ಗೆ ತನಿಖೆಯಾಗಲಿ ಎಂದು ಹೇಳಿದ್ದೇನೆ. ಅದರ ಜೊತೆಗೆ ಅಬಕಾರಿ ಇಲಾಖೆಯಲ್ಲಿನ ಈ ಪ್ರಕರಣದ ಬಗ್ಗೆಯೂ ತನಿಖೆಯಾಗಬೇಕು. ಸರ್ಕಾರ ಈ ಪ್ರಕರಣವನ್ನು ಕೂಡಲೇ ಸೂಕ್ತ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

error: Content is protected !!