ಹಾವೇರಿ: ಶಾಲೆಯ ಆವರಣದಲ್ಲಿರೋ ಹೊಂಡದಲ್ಲಿ ಬಿದ್ದು ಮೂವರು ಮಕ್ಕಳ ದುರ್ಮರಣಕ್ಕಿಡಾದ ಹೃದಯ ವಿದ್ರಾವಕ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ 2ನೇ ನಂಬರ್ ಶಾಲೆಯಲ್ಲಿ ನಡೆದಿದೆ. ಶಾಲೆಯ ಕಾಮಗಾರಿಗಾಗಿ ತೆಗೆದಿದ್ದ ಹೊಂಡದಲ್ಲಿ ಬಿದ್ದು ಈ ಮೂವರು ಮಕ್ಕಳು ದುರ್ಮರಣ ಹೊಂದಿದ್ದಾರೆ. ಕಳೆದೊಂದು ವಾರದಿಂದ ಸುರಿದ ಮಳೆಯಿಂದಾಗಿ ಶಾಲೆಯ ಆವರಣದಲ್ಲಿನ ಹೊಂಡಗಳು ತುಂಬಿದ್ದವು. ಹೀಗಾಗಿ ಆಟವಾಡಲು ಏಳೆಂಟು ಮಕ್ಕಳ ಗುಂಪು ಶಾಲೆಯ ಬಳಿಗೆ ತೆರಳಿತ್ತು. ಹೀಗೆ ಆಟವಾಡುತ್ತಾ ಅಚಾನಕ್ಕಾಗಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ಕುರಿತು ಅಗ್ನಿಶಾಮಕ ದಳದ ಸಿಬ್ಬಂದಿಗೆ ಸ್ಥಳಿಯರು ಮಾಹಿತಿ ನೀಡಿದ್ದಾರೆ .
ಮಾಹಿತಿ ತಿಳಿದು ಒಂದು ಗಂಟೆ ಕಾಲವಾದ್ರೂ ಸ್ಥಳಕ್ಕೆ ಮಾತ್ರ ಅಗ್ನಿಶಾಮಕ ದಳದವರಾಗಲಿ ಹಾಗೂ ಪುರಸಭೆ ಸಿಬ್ಬಂದಿಯಾಗಲಿ ಇಣುಕಿ ನೋಡದಕ್ಕೆ ಅಧಿಕಾರಿ ಸಿಬ್ಬಂದಿಗಳ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗುಂಡಿಯಲ್ಲಿ ಇನ್ನೂ ಮುರ್ನಾಲ್ಕು ಮಕ್ಕಳು ಸಿಲುಕಿರುವ ಶಂಕೆ ಇದ್ದು, ಮೂವರು ಮಕ್ಕಳ ಶವಗಳನ್ನು ಸ್ಥಳಿಯರು ಹೊರತೆಗೆದಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಬಂದ ಮೃತ ಮಕ್ಕಳ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಗುತ್ತಿದಾರನ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ಕಾರಣವೆಂದು ಸ್ಥಳಿಯರು ಆರೋಪಿಸುತ್ತಿದ್ದು, ಕೊಠಡಿ ನಿರ್ಮಾಣಕ್ಕಾಗಿ ಆಳೆತ್ತರ ಗುಂಡಿ ತೆಗೆದು ಹಾಗೆ ಬಿಡಲಾಗಿತ್ತು. ಇದು ತಗ್ಗು ಪ್ರದೇಶದಲ್ಲಿರುವ ಶಾಲೆಯಾಗಿರುವುದರಿಂದ ನೀರು ಹರಿದು ಗುಂಡಿ ಭರ್ತಿಯಾಗಿದೆ. ಇನ್ನುಳಿದ ಮಕ್ಕಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಶಿಕ್ಷಣ ಇಲಾಖೆಯ ವಿರುದ್ದ ಕಣ್ಣು ಕೆಂಪಾಗಿಸಿಕೊಂಡ ಸ್ಥಳೀಯ ನಿವಾಸಿಗಳು ರೊಚ್ಚಿಗೆದ್ದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.