ಹಾಸನ: ಹಾಸನದಲ್ಲಿ ಬೆಳ್ಳಂಬೆಳಿಗ್ಗೆ ಪೊಲೀಸರ ಗುಂಡು ಸದ್ದು ಮಾಡಿದೆ. ರೌಡಿ ಶೀಟರ್ ಮೇಲೆ ಹಾಸನ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಪೊಲೀಸರ ಗುಂಡೆಟಿನಿಂದ ಗಂಭೀರವಾಗಿ ಗಾಯಗೊಂಡ ರೌಡಿ ಶೀಟರ್ ಸುನಿಲ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ರೌಡಿ ಶೀಟರ್ ಸುನಿಲ್ ಬಲತೊಡೆ ಭಾಗಕ್ಕೆ ಹಾಸನ ಗ್ರಾಮಾಂತರ ಸಿಪಿಐ ಸುರೇಶ್ ಫೈರಿಂಗ್ ಮಾಡಿದ್ದಾರೆ.
ಇನ್ನು ಪ್ರಕರಣ ಮೆಲುಕು ಹಾಕೋದಾದ್ರೆ, ಕಳೆದ ಅಕ್ಟೋಬರ್ 22 ರ ರಾತ್ರಿ ಆರು ಮಂದಿಯ ತಂಡ ಮೂವರು ಯುವಕರಿಗೆ ಚೂರಿ ಇರಿದಿತ್ತು. ಆ ಪ್ರಕರಣದಲ್ಲಿ ಆರು ಜನರ ಪೈಕಿ ಎ-1 ಆರೋಪಿಯನ್ನು ಪೊಲೀಸರು ಮೊದಲೇ ಬಂಧಿಸಿದ್ದರು. ಉಳಿದವರಿಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುವರಿದಿತ್ತು. ಅದರಂತೆ ಕಳೆದ ರಾತ್ರಿ ಹಾಸನದ ಹೊರ ವಲಯದ ಕೃಷ್ಣ ನಗರದಲ್ಲಿ ಮೂವರು ಆರೋಪಿಗಳು ಇರುವ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸಲು ತೆರಳಿದ್ದ ಗ್ರಾಮಾಂತರ ಪಿಎಸ್ಐ ಬಸವರಾಜುಗೆ ಆರೋಪಿ ರೌಡಿ ಶೀಟರ್ ಚೂರಿ ಇರಿದಿದ್ದಾನೆ.
ಈ ವೇಳೆ ಹಾಸನ ಗ್ರಾಮಾಂತರ ಸಿಪಿಐ ಏರ್ ಫೈರ್ ಮಾಡಿ ಆರೋಪಿಗೆ ಶರಣಾಗುವಂತೆ ಹೇಳಿದ್ದಾರೆ. ಏರ್ ಫೈರ್ ಬಳಿಕವೂ ಆರೋಪಿಗಳು ದಾಳಿಮಾಡಲು ಮುಂದಾದಾಗ ರೌಡಿ ಶೀಟರ್ ಕಾಲಿಗೆ ಫೈರ್ ಮಾಡಿದ್ದಾರೆ. ಏಳೆಂಟು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ರೌಡಿ ಶೀಟರ್ ಸುನಿಲ್ ಸೇರಿ ಈತನೊಂದಿಗೆ ಮತ್ತಿಬ್ಬರು ಆರೋಪಿಗಳ ಅಂದರ್ ಮಾಡಿದ್ದಾರೆ. ಉಳಿದ ಇಬ್ಬರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಗಾಯಾಳು ಪಿಎಸ್ಐ ಗೆ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.