ಹಾಸನ: ಹಾಸನಾಂಬಾ ದರ್ಶನಕ್ಕೆ ಇವತ್ತು ವಿಧ್ಯುಕ್ತ ತೆರೆ ಬೀಳಲಿದೆ. ಇವತ್ತು ಮಧ್ಯಾಹ್ನ ಒಂದು ಗಂಟೆಯಿಂದ ಎರಡು ಗಂಟೆ ಸುಮಾರಿಗೆ ಗರ್ಭಗುಡಿ ಬಾಗಿಲನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಪ್ರೀತಂಗೌಡ, ಅಧಿಕಾರಿಗಳ ಸಮ್ಮುಖದಲ್ಲಿ ಮುಚ್ಚಲಾಗುವುದು. ಹಾಸನಾಂಬಾ ಜಾತ್ರಾ ಮಹೋತ್ಸವದ ಕಡೇ ದಿನದ ಹಿನ್ನೆಲೆಯಲ್ಲಿ ಅರ್ಚಕರು ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ ದೇವರ ಮುಂದೆ ದೀಪ ಹಚ್ಚಿ, ಹೂವು, ನೈವೇದ್ಯ ಇಡಲಿದ್ದಾರೆ.
ಇದರ ಇನ್ನೊಂದು ವಿಶೇಷತೆ ಎಂದ್ರೆ ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ಅರ್ಚಕರು ಇಟ್ಟ ಹೂವು ಬಾಡುವುದಿಲ್ಲ, ದೀಪ ಆರುವುದಿಲ್ಲ. ಗರ್ಭಗುಡಿ ಬಾಗಿಲನ್ನು ಅಕ್ಟೋಬರ್ ೨೮ ರಂದು ತೆರೆದಿದ್ದು, ೯ ದಿನದಲ್ಲಿ ೭ ದಿನ ಮಾತ್ರ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಲಕ್ಷಾಂತರ ಭಕ್ತರು ದೇವಿ ದರ್ಶನ ಪಡೆದಿದ್ದಾರೆ. ೧೦೦೦, ೩೦೦ ರೂಪಾಯಿ ವಿಶೇಷ ಟಿಕೆಟ್, ಲಾಡು ಮತ್ತು ಹುಂಡಿ ಕಾಣಿಕೆಯಿಂದ ಹೆಚ್ಚು ಆದಾಯ ನಿರೀಕ್ಷೆ ಇದೆ. ಇವತ್ತು ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಮುಚ್ಚಲಿದೆ.
ಹಾಸನದ ಎಸ್‍ಪಿ ಶ್ರೀನಿವಾಸ್ ನಿನ್ನೆ ದೇಗುಲದ ಹತ್ತಿರ ಭಕ್ತರ ನೂಕು ನುಗ್ಗಲು ಕಂಡು ಪರಿಸ್ಥಿತಿ ನಿಯಂತ್ರಿಸಿದ್ರು. ನಂತರ ಅವರು ಹಾಗೂ ಅವರ ಪತ್ನಿ ಸಿದ್ದೇಶ್ವರ ರಥೋತ್ಸವದಲ್ಲಿ ಭಾಗಿಯಾದ್ರು. ಶ್ರೀನಿವಾಸ್ ಅವರು ಸಿದ್ದೇಶ್ವರ ದೇಗುಲದ ಒಳಭಾಗದಿಂದ ದೇಗುಲ ಹೊರಭಾಗದ ರಥದವರೆಗೆ ದೇವರ ಅಡ್ಡೆ ಹೊತ್ತು ಬಂದಿದ್ದು, ಪಕ್ಕದಲ್ಲೆ ಅವರ ಪತ್ನಿ ನಡೆದು ಬಂದು ದೇವರಿಗೆ ಭಕ್ತಿ ಅರ್ಪಿಸಿದ್ದಾರೆ.
ಇದೆ ವೇಳೆ ಶಾಸಕ ಪ್ರೀತಂಗೌಡ ಅವರು ಸಹ ಇವರ ಜೊತೆಯಲ್ಲಿಯೇ ಅಡ್ಡೆ ಹೊತ್ತಿಕೊಂಡು ಬಂದಿದ್ದಾರೆ. ೫ ದಿನಗಳ ಹಿಂದೆ ತಿರುಪತಿಯಲ್ಲಿ ವಿವಾಹವಾಗಿರುವ ಶ್ರೀನಿವಾಸ್ ಗೌಡ ಹಾಗೂ ಅವರ ಪತ್ನಿ ಇವತ್ತು ಹಾಸನಾಂಬಾ ಜಾತ್ರಾ ಮಹೋತ್ಸವದ ಕೊನೆಯ ದಿನವಾಗಿದ್ದರಿಂದ ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ರು.