ತುಮಕೂರು: ದುಷ್ಕರ್ಮಿಗಳು ನಿಧಿಯ ಆಸೆಗಾಗಿ ಪುರಾತನ ದೇವಸ್ಥಾನದ ಗರ್ಭಗುಡಿಯನ್ನೇ ಅಗೆದಿರು ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗುಮ್ಮನಹಳ್ಳಿ ಅಂಜನೇಯ ದೇವಸ್ಥಾನದಲ್ಲಿ ನಡೆದಿದೆ.
ಆಂಜನೇಯ ದೇವಸ್ಥಾನ ಪುರಾತನ ಕಾಲದ್ದಾಗಿದ್ದು, ಶಿರಾ ದೊಡ್ಡಕೆರೆಗೆ ನೀರು ಹರಿಯುವ ಹಳ್ಳದ ದಂಡೆಗೆ ಇದೆ. ಹಲವು ವರ್ಷಗಳಿಂದ ಪೂಜಾ ಕೈಂಕರ್ಯ ನಡೆಯದ ಕಾರಣ ದೇವಾಲಯದ ಸುತ್ತಮುತ್ತ ಗಿಡಗಂಟಿ ಬೆಳೆದು ಮುಚ್ಚಿಹೋಗಿತ್ತು. ಇದನ್ನೇ ಅವಕಾಶವಾಗಿ ಬಳಸಿಕೊಂಡಿರುವ ದುಷ್ಕರ್ಮಿಗಳು, ದೇವಾಲಯದ ಗರ್ಭಗುಡಿ ಅಗೆದಿದ್ದಾರೆ.
ಇಂದು ಬೆಳಗ್ಗೆ ಕೆಲ ಯುವಕರು ದೇವಾಲಯದ ಬಳಿ ಹೋದಾಗ ಗರ್ಭಗುಡಿ ಮತ್ತು ಒಳ ಆವರಣದಲ್ಲಿ ಹತ್ತಾರು ಅಡಿ ಅಗೆದಿರುವುದು ಬೆಳಕಿಗೆ ಬಂದಿದೆ.
ನಿಧಿ ಆಸೆಗಾಗಿ ಕಳ್ಳರು ದೇವಾಲಯದ ಗರ್ಭಗುಡಿ ಅಗೆದಿರುವುದಾಗಿ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಶಿರಾ ಪೊಲೀಸರು ಭೇಟಿ ನೀಡಿ, ಗರ್ಭಗುಡಿ ಅಗೆದಿರುವ ಸುತ್ತಮುತ್ತ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.