ಬೆಂಗಳೂರು: ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಎಚ್.ಕೆ. ಪಾಟೀಲ್ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಸಂದರ್ಭದಲ್ಲಿ ಗದಗದ ಕುರ್ತಕೋಟಿಯಲ್ಲಿ ಅಂಪ್ಲಸ್ ಕೆಎನ್ ಸೋಲಾರ್ ಪ್ರೈವೇಟ್ ಲಿ.ಗೆ ವಿವಿಧ ಅನುಕೂಲಗಳನ್ನು ಮಾಡಿಕೊಟ್ಟು, ರಾಜ್ಯದ ಬೊಕ್ಕಸಕ್ಕೆ ಈಗಾಗಲೇ 270 ಕೋಟಿ ರು. ನಷ್ಟ ಮಾಡಿದ್ದಾರೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿರುವುದಾಗಿ ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ ತಿಳಿಸಿದ್ದಾರೆ. ಅಂಪ್ಲಸ್ ಕೆಎನ್ ಸೋಲಾರ್ಗೆ ಕಾನೂನುಬಾಹಿರವಾಗಿ ಯೋಜನೆ ಜಾರಿಗೊಳಿಸಲು ಅವಕಾಶ ಮಾಡಿಕೊಟ್ಟು ಎಚ್.ಕೆ. ಪಾಟೀಲ್ ಮತ್ತವರ ಕುಟುಂಬ 116.18 ಕೋಟಿ ರು.ಗಳ ಪ್ರಯೋಜನವನ್ನು ಪಡೆದುಕೊಂಡಿದೆ. ಈ ಬಗ್ಗೆ ದಾಖಲೆ ಸಹಿತವಾಗಿ ದೂರು ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಅಂಪ್ಲಸ್ ಕೆಎನ್ ಸೋಲಾರ್ ಸಂಸ್ಥೆಯು ಎಚ್.ಕೆ. ಪಾಟೀಲ್ ಮತ್ತು ಸರ್ಕಾರದ ಕೆಲ ಅಧಿಕಾರಿಗಳ ನೆರವಿನಿಂದ ಫೆ. 8, 2018 ಹಾಗೂ ಮಾಚ್ರ್ 27, 2018ರಂದು ಕ್ರಮವಾಗಿ 100 ಮೆಗಾವಾಟ್ ಮತ್ತು 35 ಮೆಗಾವಾಟ್ ಉತ್ಪಾದನೆ ಪ್ರಾರಂಭಿಸಿರುವ ಪ್ರಮಾಣ ಪತ್ರವನ್ನು ಕಾನೂನುಬಾಹಿರವಾಗಿ ಸರ್ಕಾರಕ್ಕೆ ಸಲ್ಲಿಸಿದೆ. 135 ಮೆಗಾವಾಟ್ ಸಾಮರ್ಥ್ಯದ ಸೌರ ಘಟಕ 691 ಎಕರೆ ಜಮೀನಿನಲ್ಲಿ ನಿರ್ಮಾಣವಾಗಿದೆ. ಇದರಲ್ಲಿ 222 ಎಕರೆ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯೆಂದು ವಾಣಿಜ್ಯ ಬಳಕೆಯ ಅನುಮತಿ ಪತ್ರ ಪಡೆಯುವ ಮುಂಚಿತವಾಗಿ ಪರಿವರ್ತಿಸಿರಲಿಲ್ಲ. ಇದರಲ್ಲಿ 135 ಎಕರೆ ಜಮೀನಿನ ಭೂ ಪರಿವರ್ತನೆಗಾಗಿ ಮನವಿಯನ್ನು ಕೂಡ ಸಲ್ಲಿಸಲಾಗಿಲ್ಲ. ಇದು ವಾಣಿಜ್ಯ ಉತ್ಪಾದನೆ ಆರಂಭಗೊಳ್ಳುವ ಮುಂಚಿತವಾಗಿ ಭೂ ಪರಿವರ್ತನೆ ಆಗಿರಬೇಕು ಎಂಬ ನಿಯಮದ ಉಲ್ಲಂಘನೆ ಎಂದು ಅವರು ಆರೋಪಿಸಿದ್ದಾರೆ.
ಈ ಸಂಸ್ಥೆಯು ಕಾನೂನುಬಾಹಿರವಾಗಿ ವಾಣಿಜ್ಯ ಉತ್ಪಾದನೆಯ ಪ್ರಮಾಣ ಪತ್ರ ಪಡೆದಿದ್ದರಿಂದ ವರ್ಷಕ್ಕೆ 60 ಕೋಟಿಯಂತೆ ರಾಜ್ಯದ ಬೊಕ್ಕಸಕ್ಕೆ ಈಗಾಗಲೇ 270 ಕೋಟಿ ರು. ನಷ್ಟವಾಗಿದೆ. ಇದು ಹತ್ತು ವರ್ಷಗಳ ವಿನಾಯಿತಿ ಆಗಿರುವುದರಿಂದ ರಾಜ್ಯಕ್ಕೆ ಒಟ್ಟು 600 ಕೋಟಿ ರು. ನಷ್ಟವಾಗಲಿದೆ. ಹಾಗೆಯೇ ಸಂಸ್ಥೆ ಮಾಡಿದ ಅಕ್ರಮ ಪತ್ತೆ ಆಗಿದ್ದರೂ ಕೂಡ ಜಿಲ್ಲಾಧಿಕಾರಿ ಅವರು 1.16 ಕೋಟಿ ರು. ದಂಡ ವಸೂಲಿ ಮಾಡಿಲ್ಲ. ಹಾಗೆಯೇ ಪರ್ಫಾಮೆನ್ಸ್ ಬ್ಯಾಂಕ್ ಗ್ಯಾರಂಟಿಯ 8.50 ಕೋಟಿ ರು.ಗಳನ್ನು ಕಾನೂನುಬಾಹಿರವಾಗಿ ಹಿಂತಿರುಗಿಸಲಾಗಿದೆ. ರಾಜ್ಯಕ್ಕೆ ಒಟ್ಟಾರೆ 280 ಕೋಟಿ ರು.ಗಳಷ್ಟುನಷ್ಟವಾಗಿದೆ ಎಂದು ಅಬ್ರಹಾಂ ದೂರಿನಲ್ಲಿ ಹೇಳಿದ್ದಾರೆ.
ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸುವ ಹೊಣೆಯನ್ನು ಎಚ್.ಕೆ. ಪಾಟೀಲ್ ಅವರ ಸಂಬಂಧಿ ರಂಗನಗೌಡ ಪಾಟೀಲ್ ಅವರ ಆದಿತಿ ಸೋಲಾರ್ ಪವರ್ ಲಿ. ನಿರ್ವಹಿಸಿತ್ತು. ಇದಕ್ಕಾಗಿ ಮ್ಯಾನೇಜ್ಮೆಂಟ್ ಶುಲ್ಕವಾಗಿ ಎಂದು ಪ್ರತಿ ಎಕರೆಗೆ ಎಂಟು ಸಾವಿರ ರು. (ಒಟ್ಟು 16.30 ಕೋಟಿ ರು.) ಪಡೆದುಕೊಂಡಿದೆ. ಇದು ಕಿಕ್ಬ್ಯಾಕ್ ವ್ಯವಸ್ಥೆ. ಹಾಗೆಯೇ ಎಚ್.ಕೆ. ಪಾಟೀಲ್ ಅವರಿಗೆ ಸೇರಿದ್ದ 32 ಎಕರೆ ಜಮೀನನ್ನು ಯೋಜನೆಗೆ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.