ಬೆಂಗಳೂರು: ಹಲಾಲ್ ಕಟ್, ಜಟ್ಕಾ ಕಟ್ ಬಿಟ್ಟು ಬಿಡಿ ಬೆಲೆ ಏರಿಕೆ ವಿರುದ್ಧ ಹೋರಾಡಿ. ನಾನೂ ಕೇಸರಿ ಶಾಲು ಧರಿಸಿ ಹೋರಾಟಕ್ಕೆ ಬರುತ್ತೇನೆ. ಬೆಲೆ ಏರಿಕೆ ವಿರುದ್ಧ ಹೋರಾಟಕ್ಕೆ ರೆಡಿ ಇದ್ದೀರಾ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಬೆಂಗಳೂರಿನ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ ಅವರು, ಮುಸ್ಲೀಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್ ಕಟ್, ಹಿಜಾಬ್ ವಿವಾದ ಸೇರಿದಂತೆ ಭಜರಂಗದಳ, ಹಿಂದೂಪರ ಸಂಘಟನೆಗಳ ವಿರುದ್ಧ ಟೀಕಾಪ್ರಹಾರ ಮುಂದುವರೆಸಿದರು.
ಎಲ್ಲಿ ಇತ್ತು ಜಾತಿ ವ್ಯವಸ್ಥೆ? ಎಲ್ಲಿ ಇತ್ತು ಹಿಂದೂ ದೇಶ? ಎಲ್ಲವೂ ನಮ್ಮ ನಮ್ಮ ಅನುಕೂಲಕ್ಕೆ ಮಾಡಿಕೊಂಡದ್ದು. ಧರ್ಮ ವಿಭಜನೆ ಮಾಡಿ ಮಜಾ ತಗೊಳ್ಳುವವರು, ಉರಿಯುವ ಮನೆಯಲ್ಲಿ ಇರಿಯೋ ಕಾಯಕ ಮಾಡ್ತಿದ್ದೀರಿ.
ಬಿಜೆಪಿ ಹಿಂದೂ ಧರ್ಮದಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡಿಲ್ಲ, ಅವರಿಗೆ ಬೇಕಾದಾಗ ಮಾತ್ರ ಒಟ್ಟಿಗೆ ತೆಗೆದುಕೊಳ್ಳುತ್ತಾರೆ. ಇದನ್ನೆಲ್ಲಾ ಇಲ್ಲಿಗೇ ನಿಲ್ಲಿಸಿ, ಬಡವರನ್ನ ರಕ್ಷಿಸಿ ಎಂದು ಕುಮಾರಸ್ವಾಮಿ ಕರೆ ನೀಡಿದ್ದಾರೆ.
ಬಿಜೆಪಿ ಜನರನ್ನು ನಿರ್ಗತಿಕರನ್ನಾಗಿ ಮಾಡುತ್ತಿದೆ. ಇದರಲ್ಲಿ ಕಾಂಗ್ರೆಸ್ ಪಾಲೂ ಇದೆ 2 ರಾಷ್ಟ್ರೀಯ ಪಕ್ಷಗಳು 150ರ ರೋಡ್ ಮ್ಯಾಪ್ ಪ್ಲಾನ್ ಮಾಡಿಕೊಂಡು ಮನೆ ಮನೆಗೆ ಬೆಂಕಿ ಹಚ್ಚಲು ಹೊರಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಬಿಜೆಪಿಯ ಬಿ-ಟೀಮ್ ಎಂದು ಸಾರಿದ್ದ ವಿಪಕ್ಷ ನಾಯಕ ಸಿದ್ದರಾಮ್ಯಯ ಅವರೇ ಈಗೇನು ದೊಡ್ಡ ಸಾಧನೆ ಮಾಡಿದ್ದೀರಾ? ಹಿಜಾಬ್ ಹೆಸರು ಹೇಳ್ಬೇಡಿ ಹಿಂದೂ ಓಟ್ ಹೋಗುತ್ತೆ ಎಂದು ನಿಮ್ಮ ಅಧ್ಯಕ್ಷರೇ ಹೇಳಿದ್ದಾರೆ.
ಹಿಂದೂ ಮುಸ್ಲಿಂ ನವರು ದಡ್ಡರಲ್ಲ. ವಿಶ್ವ ಹಿಂದೂ ಪರಿಷತ್‌ನವರು ಬೆಂಕಿ ಹಚ್ಚಲು ಬರುತ್ತಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೌನದ ಬಗ್ಗೆ ಟೀಕಿಸಿರುವ ಹೆಚ್.ಡಿ.ಕುಮಾರಸ್ವಾಮಿ, ಇಷ್ಟೆಲ್ಲಾ ವಿವಾದ ಇದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೌನಿ ಬಾಬಾ ಆಗಿದ್ದಾರೆ. ಮನ್ ಮೋಹನ್ ಸಿಂಗ್ ಮೌನಿ ಅನ್ನುತಿದ್ದರು ಈಗ ಬೊಮ್ಮಾಯಿ ಮೌನವಾಗಿದ್ದಾರೆ. ಸರ್ಕಾರ ಸ್ವತಂತ್ರವಾಗಿ ನಡೆಯುತ್ತಿಲ್ಲ ರಿಮೋಟ್ ಕಂಟ್ರೋಲ್ ನಲ್ಲಿ ನಡೆಯುತ್ತಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ರಾಜ್ಯದಲ್ಲಿ ಸೌಹಾರ್ದತೆಗೆ ಧಕ್ಕೆ ಬಂದಾಗ ಮೌನವಾಗಿದ್ದವರು ಯಾರು? ಅಧಿವೇಶನದಲ್ಲಿ ಸುಮ್ಮನೆ ಕೂತವರು ಯಾರು? ಮತಾಂತರ ಬಿಲ್ ಬಗ್ಗೆ ಬೆಳಗಾವಿಯಲ್ಲಿ ಎದುರಿಸಲಾಗದೇ ಪಲಾಯನ ಮಾಡಿದ್ದು ಯಾಕೆ? ಗೋಹತ್ಯೆ ಬಿಲ್ ಬಂದಾಗ ಸದನದಲ್ಲಿ ಗೊಂದಲ ಸೃಷ್ಟಿಸಿದ್ದು ಯಾರು? ಗೋಹತ್ಯೆ ನಿಷೇಧ ಕಾಯ್ದೆ ವಿರುದ್ದ ಮೊದಲು ರಾಷ್ಟ್ರಪತಿಗೆ ದೂರು ಕೊಟ್ಟಿದ್ದು ದೇವೇಗೌಡರು. ನಮ್ಮ ಪಕ್ಷವೇ ಮೊದಲು ಅದರ ಬಗ್ಗೆ ಧ್ವನಿ ಎತ್ತಿದ್ದು. ನಾವು ಅದರ ವಿರುದ್ಧ ಮತ ಚಲಾಯಿಸಲು ತಯಾರಿದ್ದೆವು. ಅವರ ತಪ್ಪು ಇಟ್ಕೊಂಡು ನಮ್ಮ ಬಗ್ಗೆ ಮತನಾಡಲು ಕಾಂಗ್ರೆಸ್‌ಗೆ ನೈತಿಕತೆ ಏನಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ರಾಹುಲ್‌ಗಾಂಧಿ ಬಂದಾಗ ವಿಪಕ್ಷ ನಾಯಕ ಸಿದ್ದರಾಮಯ್ಯ, ಹಲಾಲ್ ಮತ್ತು ಹಿಜಾಬ್ ವಿಚಾರದಲ್ಲಿ ನಾವು ಮಾತನ್ನಾಡಬೇಕಿತ್ತು ಎಂದು ಹೇಳುತ್ತಾರೆ. ಇಷ್ಟಾದ ಮೇಲೂ ಜೆಡಿಎಸ್ ಬಿಜೆಪಿಯ ಬಿ-ಟೀಮ್ ಎಂದು ಹೇಳುತ್ತಾರೆ. ನೀವೆ ರಾಜ್ಯದಲ್ಲಿ ಬೆಂಕಿ ಹಚ್ಚಿದ್ದು, ನೀವೇ ಬಿಜೆಪಿ ಸರ್ಕಾರ ನಿರ್ಮಾಣ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದು, ಇನ್ನಾದರೂ ಹಲಾಲ್, ಹಿಜಾಬ್ ವಿಚಾರದಲ್ಲಿ ಧೈರ್ಯವಾಗಿ ಎದುರಿಸಿ ಎಂದು ಎಚ್.ಡಿ.ಕುಮಾರಸ್ವಾಮಿ ಕುಟುಕಿದರು.
ಅಲ್ಲದೆ, ಬಿಜೆಪಿಯವರು ನಾನು ದಾರ್ಶನಿಕ ಎನ್ನುತ್ತಾರೆ, ನಾನು ದಾರ್ಶನಿಕ ಎಂದು ಬೋರ್ಡ್ ಹಾಕಿಕೊಂಡಿಲ್ಲ, ನೀವೆ ಹಾಕಿಕೊಂಡಿರುವುದು. ನಾನು ಸಮಾಜ ಪರಿವರ್ತನಾಕಾರಕ ಅಲ್ಲ, ಇಂತ ವಿಷಯ ತೆಗೆದು ಮತಬ್ಯಾಂಕ್ ಮಾಡಲ್ಲ, ಬೆಂದ ಮನೆಯಲ್ಲಿ ಇಡುವ ಬುದ್ಧಿ ನನಗಿಲ್ಲ, ಕಂದಾಚಾರ ಇರುವ ನೀವು ನನಗೆ ಬುದ್ದಿ ಹೇಳುತ್ತೀರಾ? ಎಂದು ತಿರುಗೇಟು ನೀಡಿದ್ರು. ಯುಗಾದಿಗೆ ಇಷ್ಟು ಪ್ರಚಾರ ಯಾವತ್ತು ಸಿಕ್ಕಿರಲಿಲ್ಲ. ಒಳ್ಳೆಯ ಮನರಂಜನೆ ಸಿಕ್ಕಿತು. ಪ್ರತಿದಿನ ಯುಗಾದಿ ಮಾದರಿಯ ಸುದ್ದಿಗಳೇ ವಿಜ್ರಂಭಿಸಲಿದೆ. ಮುಂದಿನ ಚುನಾವಣೆಯವರೆಗೂ ಪರಿಸ್ಥಿತಿ ಹೀಗೆ ಇರಲಿದೆ.