ಬೆಳಗಾವಿ; ಕೋವಿಡ್ 19 ಮೂರನೇ ಅಲೆ ಬರಬಹುದೆಂಬ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಕೋವಿಡ್19ರ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಗಡಿಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಬೇಕು ಎಂದು ಉಪಮುಖ್ಯಮಂತ್ರಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.
ಮಹಾರಾಷ್ಟ್ರದಿಂದ ಬೆಳಗಾವಿ ಜಿಲ್ಲೆಯ ಎಲ್ಲ ಗಡಿಗಳ ಮೂಲಕ ಆಗಮಿಸುವ ಜನರನ್ನು ಕೋವಿಡ್ ನಿವಾರಣೆ ದೃಷ್ಟಿಯಿಂದ ಪರೀಕ್ಷೆಗೆ ಒಳಪಡಿಸುವುದು ಅತ್ಯಂತ ಕಟ್ಟುನಿಟ್ಟಿನಿಂದ ಆಗಬೇಕಿದೆ.
ಈ ನಿಟ್ಟಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳು (ಆರೋಗ್ಯ ಕಂದಾಯ ಶಿಕ್ಷಣ ಪೊಲೀಸ್) ಕೋವಿಡ್ 19 ಕುರಿತಂತೆ ಜಾಗೃತಿಯನ್ನು ಮೂಡಿಸಬೇಕು.
ಜನರ ಆರೋಗ್ಯ ರಕ್ಷಣೆಯ ಜವಾಬ್ದಾರಿಯನ್ನು ನಿಭಾಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಎಲ್ಲಾ ಇಲಾಖೆಯ ಅಧಿಕಾರಿಗಳು ಗಡಿಭಾಗದ ಚೆಕ್ ಪೋಸ್ಟ್ ತಪಾಸಣೆಯನ್ನು ಬಿಗಿಗೊಳಿಸಿ ಕರ್ತವ್ಯ ನಿರ್ವಹಿಸುವಂತೆ ಎಲ್ಲ ಅಧಿಕಾರಿಗಳಿಗೆ ಸೂಚನೆಯನ್ನು ನೀಡಬೇಕು.
ಕರ್ತವ್ಯಲೋಪ ಮಾಡುವಂತಹ ಅಧಿಕಾರಿಗಳಿಗೆ ಶಿಸ್ತು ಕ್ರಮವನ್ನು ಜರುಗಿಸಬೇಕು ಎಂದು ಉಪಮುಖ್ಯಮಂತ್ರಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದೇ ರೀತಿ ಕೋವಿಡ್ ನಿಯಂತ್ರಣಕ್ಕಾಗಿ ಪ್ರಾದೇಶಿಕ ಆಯುಕ್ತರು, ಉತ್ತರ ವಲಯದ ಐಜಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೂಡ ಉಪಮುಖ್ಯಮಂತ್ರಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಸೂಚನೆಯನ್ನು ನೀಡಿದ್ದಾರೆ.