ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ಜಾರಿಯಾದ ಕಾರಣ ರಾಜ್ಯದ ಹಲವರ ಬದುಕು ಅತ್ಯಂತ ಹೀನಾಯ ಪರಿಸ್ಥಿತಿಗೆ ಬಂದು ತಲುಪಿದೆ. ಹೀಗಾಗಿ ರಾಜ್ಯ ಸರ್ಕಾರ ಬಡ ಮತ್ತು ಕೆಳವರ್ಗದ ಜನರ ನೆರವಿಗಾಗಿ ಇಂದು 1,250 ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್ ಘೋಷಿಸಿದೆ. ಈ ಪ್ಯಾಕೇಜ್ ಬಗ್ಗೆ ಪ್ರತಿಕ್ರಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಹೂ ಬೆಲಕೆಗಾರರಿಗೆ ಒಂದು ಹೆಕ್ಟೇರ್ ಗೆ 10 ಸಾವಿರ ರೂಪಾಯಿ ಘೋಷಣೆ ಮಾಡಿದ್ದಾರೆ. ಅಂದರೆ ಎಕರೆಗೆ ಮೂರೂವರೆ ಸಾವಿರ ರೂಪಾಯಿ ಮಾತ್ರ ಸಿಗುತ್ತದೆ. ಎಕರೆಯಲ್ಲಿ ಬೆಳೆ ಬೆಳೆಯಲು 3 ಸಾವಿರ ರೂ. ಆಗುತ್ತಾ? ಇವರಿಗೆ 20 ಸಾವಿರ ರೈತರ ಪಟ್ಟಿ ಕೊಟ್ಟವರು ಯಾರು? ಇದು ಕೇವಲ ಕಣ್ಣೊರೆಸುವ ತಂತ್ರವಷ್ಟೆ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಕಳೆದ ಬಾರಿ ಆಟೋ ಚಾಲಕರ ಪಟ್ಟಿ 7 ಲಕ್ಷ ಇತ್ತು. ಈ ಬಾರಿ 2 ಲಕ್ಷಕ್ಕೆ ಇಳಿಕೆಯಾಗಿದ್ದು ಹೇಗೆಂದು ಪ್ರಶ್ನಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಜೆಪಿ ಸರ್ಕಾರ ಬರುವುದಕ್ಕೂ ಮುನ್ನ 7 ಕೆಜಿ ಅಕ್ಕಿ, ಬಿಜೆಪಿ ಸರ್ಕಾರ ಬಂದ ಬಳಿಕ 5 ಕೆಜಿಗೆ ಇಳಿಕೆ ಮಾಡಿದರು. ಇವರು ಕಾರ್ಮಿಕರಿಗೆ ಸರ್ಕಾರದಿಂದ ಹಣ ನೀಡುವುದಿಲ್ಲ. ಕಾರ್ಮಿಕರು ಇಟ್ಟಿರುವ ಎಫ್ಡಿ ಹಣದಿಂದ ನೀಡುತ್ತಾರಷ್ಟೆ. ಇದು ಅವೈಜ್ಞಾನಿಕ ಪರಿಹಾರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.