ಬೆಂಗಳೂರು: ಗಿಗ್ ಕಾರ್ಮಿಕರ ಮಸೂದೆ ಕುರಿತಂತೆ ವಿವಿಧ ಕಾರ್ಪೊರೇಟ್ ಕಂಪನಿಗಳ ಮುಖ್ಯಸ್ಥರೊಂದಿಗೆ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ನಿನ್ನೆ ಉನ್ನತ ಮಟ್ಟದ ಸಭೆ ನಡೆಸಿದರು.
ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಹಾಗೂ ಆರ್ಥಿಕ ಅನುಕೂಲಗಳನ್ನು ಒದಗಿಸಲು ಕಾರ್ಮಿಕ ಇಲಾಖೆ ಹಲವು ದಿಟ್ಟ ಹೆಜ್ಜೆಗಳನ್ನು ಇರಿಸುತ್ತಿದ್ದು, ಈ ಮಸೂದೆಯು ಮಹತ್ವದ ಪಾತ್ರ ವಹಿಸಲಿದೆ. ಸಭೆಯಲ್ಲಿ ಗಿಗ್ ಕಾರ್ಮಿಕರ ಮಸೂದೆ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ ಸಚಿವ ಸಂತೋಷ್ ಲಾಡ್ ಅವರು ಸಲಹೆ, ಅಭಿಪ್ರಾಯಗಳನ್ನು ಸಂಗ್ರಹಿಸಿದರು.
ರಾಜ್ಯದ ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ನೆರವು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದ್ದು, ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಗೆ ಮುಂದಾಗಿದೆ. ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ಬರಲಿದೆ. ಇದರಿಂದ ಅಸಂಖ್ಯಾತ ಗಿಗ್ ಕಾರ್ಮಿಕರಿಗೆ ಜೀವನ ಭದ್ರತೆ ಸೇರಿದಂತೆ ಹಲವು ಅನುಕೂಲಗಳು ಸಿಗಲಿವೆ.
ಇಂದಿನ ಸಭೆಯಲ್ಲಿ ಕಾರ್ಮಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮೊಹಮ್ಮದ್ ಮೊಹಸೀನ್, ಕಾರ್ಮಿಕ ಆಯುಕ್ತರಾದ ಶ್ರೀ ಎಚ್ ಎನ್ ಗೋಪಾಲಕೃಷ್ಣ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.