ಹಾಸನ: ಮಂಗಳೂರಿಂದ ಬೆಂಗಳೂರಿಗೆ ಗ್ಯಾಸ್ ಸಾಗಿಸುತ್ತಿದ್ದ ಟ್ಯಾಂಕರ್ ಒಂದು ಚಾಲಕನ ಕಂಟ್ರೋಲ್ ತಪ್ಪಿ ಉರುಳಿ ನೆಲಕ್ಕೆ ಬಿದ್ದ ಘಟನೆಯು ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪದಲ್ಲಿ ಸಂಭವಿಸಿದೆ. ಟ್ಯಾಂಕರ್ ಉರುಳಿ ಬಿದ್ದ ಪರಿಣಾಮ, ಟ್ಯಾಂಕರ್ ನಿಂದ ಅನಿಲ ಸೋರಲು ಆರಂಭಿಸಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಮಾರನಹಳ್ಳಿ ಸಮೀಪ ಹಾಸನ ಮಂಗಳೂರು ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನಗಳಿಗೆ ನಿರ್ಬಂಧ ವಿಧಿಸಿ ಬದಲಿ ಮಾರ್ಗ ಕಲ್ಪಿಸಲಾಗಿದೆ. ಟ್ಯಾಂಕರ್ ಉರುಳಿ ಬಿದ್ದ ಪರಿಣಾಮ ಇಂಜಿನ್ ಒಳಗೆ ಸುಮಾರು ೨ ಗಂಟೆಗೂ ಹೆಚ್ಚು ಕಾಲ ಚಾಲಕ ಸಿಕ್ಕಿಹಾಕಿಕೊಂಡು ಆತಂಕ ಸೃಷ್ಟಿಯಾಗಿತ್ತು. ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರು, ಕ್ರೇನ್ ಸಹಾಯದಿಂದ ಚಾಲಕನನ್ನು ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ. ಸುರಕ್ಷತಾ ದೃಷ್ಟಿಯಿಂದ ಗ್ಯಾಸ್ ಟ್ಯಾಂಕರ್ ಬಿದ್ದ ಸ್ಥಳದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದ್ದು, ವಾಹನ ಸಂಚರಿಸಲು ಬದಲಿ ಮಾರ್ಗ ಕಲ್ಪಿಸಿಕೊಡಲಾಗಿದೆ.