ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ನಿರ್ಮಾಪಕಿ ಆಗಿ ಗುರುತಿಸಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ನಿಧನ ಹೊಂದಿದ ನಂತರದಲ್ಲಿ ಅವರು ಮೌನ ವಹಿಸಿದ್ದೇ ಹೆಚ್ಚು. ಸಭೆ ಸಮಾರಂಭಗಳಲ್ಲೂ ಅವರು ಅಷ್ಟಾಗಿ ಮಾತನಾಡಿಲ್ಲ. ಸದ್ಯ ‘ಪಿಆರ್ಕೆ ಪ್ರೊಡಕ್ಷನ್’ನ ಸಂಪೂರ್ಣ ಜವಾಬ್ದಾರಿಯನ್ನು ಅವರೇ ಹೊತ್ತುಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ಕನಸಿನ ಪ್ರಾಜೆಕ್ಟ್ ‘ಗಂಧದ ಗುಡಿ’ ಸಾಕ್ಷ್ಯ ಚಿತ್ರವನ್ನು ಅವರು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಅದಕ್ಕೂ ಮೊದಲು ಈ ಡಾಕ್ಯುಮೆಂಟರಿಗೆ ಧ್ವನಿ ನೀಡಿದ್ದು ಯಾರು ಎನ್ನುವ ವಿಚಾರ ರಿವೀಲ್ ಆಗಿದೆ. ಸ್ವತಃ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಈ ಸಾಕ್ಷ್ಯಚಿತ್ರಕ್ಕೆ ಕಂಠದಾನ ಮಾಡಿದ್ದಾರೆ ಅನ್ನೋದು ವಿಶೇಷ.
ಪುನೀತ್ ರಾಜ್ಕುಮಾರ್ ಅವರು ‘ಗಂಧದ ಗುಡಿ’ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಇದರ ಟೈಟಲ್ ರಿವೀಲ್ ಆಗುವುದಕ್ಕೂ ಕೆಲವೇ ದಿನ ಮೊದಲು ಪುನೀತ್ ನಿಧನ ಹೊಂದಿದರು. ನವೆಂಬರ್ 1ಕ್ಕೆ ಇದರ ಶೀರ್ಷಿಕೆ ಅನಾವರಣಗೊಳ್ಳಬೇಕಿತ್ತು. ದುಃಖದ ಸಂಗತಿ ಎಂದರೆ ಪುನೀತ್ ಅಕ್ಟೋಬರ್ 29ರಂದೇ ಮೃತಪಟ್ಟರು. ನಂತರ ಈ ಡಾಕ್ಯುಮೆಂಟರಿಯ ಜವಾಬ್ದಾರಿ ಅಶ್ವಿನಿ ಅವರ ಹೆಗಲೇರಿತು.
ಪುನೀತ್ ನಿಧನದ ವೇಳೆ ಕೆಲವು ದಿನಗಳು ಶೂಟಿಂಗ್ ಬಾಕಿ ಇತ್ತು. ಅದನ್ನು ಅಮೋಘವರ್ಷ ಅವರು ಪೂರ್ಣಗೊಳಿಸಿದ್ದಾರೆ. ಈಗ ಅಕ್ಟೋಬರ್ 28ರಂದು ‘ಗಂಧದ ಗುಡಿ’ ರಿಲೀಸ್ ಆಗುತ್ತಿದೆ. ಇದಕ್ಕೆ ಯಾರು ಧ್ವನಿ ನೀಡುತ್ತಾರೆ ಎಂಬ ಕುತೂಹಲ ಇತ್ತು. ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಇದಕ್ಕೆ ಧ್ವನಿ ನೀಡುತ್ತಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಡಾಕ್ಯುಮೆಂಟರಿಗಳು ಯೂಟ್ಯೂಬ್ನಲ್ಲಿ ರಿಲೀಸ್ ಆಗುತ್ತವೆ. ಆದರೆ, ‘ಗಂಧದ ಗುಡಿ’ಯನ್ನು ಥಿಯೇಟರ್ನಲ್ಲೇ ರಿಲೀಸ್ ಮಾಡಬೇಕು ಎಂಬುದು ಪುನೀತ್ ಕನಸಾಗಿತ್ತು. ಆ ಕನಸು ಈಗ ನನಸಾಗುತ್ತಿದೆ. ಈ ಸಾಕ್ಷ್ಯಚಿತ್ರದ ಬಗ್ಗೆ ಅನೇಕ ಸ್ಟಾರ್ಗಳ ಜತೆ ಮಾತುಕತೆ ನಡೆಸಿದ್ದರು. ಹೀಗಾಗಿ, ‘ಗಂಧದ ಗುಡಿ’ಗೆ ಸ್ಯಾಂಡಲ್ವುಡ್ನ ಎಲ್ಲರ ಬೆಂಬಲ ಸಿಗುತ್ತಿದೆ. ಅನೇಕ ಸ್ಟಾರ್ಗಳು ಇದನ್ನು ಬೆಂಬಲಿಸುತ್ತಿದ್ದಾರೆ.