ಕೂಗು ನಿಮ್ಮದು ಧ್ವನಿ ನಮ್ಮದು

ಮಳೆಗಾಗಿ ಕಪ್ಪೆಗಳಿಗೆ ಮದುವೆ ಮಾಡಿಸಿದ ಗ್ರಾಮಸ್ಥರು!

ಹುಬ್ಬಳ್ಳಿ: ಪ್ರತಿ ವರ್ಷಜೂನ್ ತಿಂಗಳು ಬಂದ್ರೆ ಸಾಕು ಮಳೆರಾಯ ಬರ್ತಾನೆ ಮದುವೆ ಕಾರ್ಯ ಮಾಡೋಕ ಆಗಲ್ಲಾ ಅಂತಿದ್ದ ಜನರು. ಇವತ್ತು ಮಳೆ ಬರ್ಲಪ್ಪಾ ಅಂತಾ ಕೈ ಮುಗಿದು ಕಪ್ಪೆಗಳಿಗೆ ಮದುವೆ ಮಾಡುವ ಮೂಲಕ ವಿಶೇಷ ಆಚರಣೆಗೆ ಸಾಕ್ಷಿಯಾಗಿದ್ದಾರೆ. ಮಳೆರಾಯನ ಆಗಮನಕ್ಕೆ ಜನ ಕಾಯುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಹುಬ್ಬಳ್ಳಿ- ಧಾರವಾಡ ಜಿಲ್ಲೆಯಲ್ಲಿ ಕಪ್ಪೆ ಗಳಿಗೆ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಈಗ ಕಪ್ಪೆಗಳಿಗೆ ಮದುವೆ ಮಾಡಿ ಮಳೆರಾಯನಿಗೆ ಮೊರೆ ಹೋಗಲಾಯಿತು.

ವಾದ್ಯ ಮೇಳದೊಂದಿಗೆ ಕಪ್ಪೆಗಳ ಮೆರವಣಿಗೆ
ಮಳೆ ಆಗಿಲ್ಲ ಅಂದ್ರೆ ನಮ್ಮ ಪೂರ್ವಜರು ಕಪ್ಪೆಗಳಿಗೂ, ಕೋತಿಗೂ ಕೋಳಿಗೂ ಮದುವೆ ಮಾಡ್ತಾರೆ ಎಂಬ ನಂಬಿಕೆಯ ಮಾತುಗಳನ್ನ ನಾವೆಲ್ಲಾ ಕೇಳಿದ್ದು ಉಂಟು, ಆದ್ರೆ ಈ ನಂಬಿಕೆಯಲ್ಲಿ ವಿಶ್ವಾಸವಿಟ್ಟ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುರಶೆಟ್ಟಿಕೊಪ್ಪ ಗ್ರಾಮದ ಜನರು ಅರಿಶಿನ ಶಾಸ್ತ್ರ, ಹಂದರ ಶಾಸ್ತ್ರ, ವಿವಿಧ ವಾದ್ಯ ಮೇಳಗಳೊಂದಿಗೆ ಕಪ್ಪೆಗಳನ್ನ ಗ್ರಾಮದಲ್ಲಿ ಮೆರವಣಿಗೆ ಮಾಡುವ ಮೂಲಕ ಕಪ್ಪೆಗಳಿಗೆ ಮದುವೆ ಮಾಡಿದ್ದಾರೆ.

ಬೆಳಗ್ಗೆ ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮುತ್ತೈದೆಯರೆಲ್ಲರೂ ಉಡಿ ತುಂಬಿಕೊಂಡು ಕಪ್ಪೆಗಳಿಗೆ ಅರಿಶಿನ ಹಚ್ಚಿ, ಸುರಗಿ ನೀರೇರೆದು, ಹಾಸಕ್ಕಿ ಹಾಕಿ, ಕಪ್ಪೆಗಳಿಗೆ ತಾಳಿ ಕಟ್ಟಿಸಿ ಮದುವೆ ಮಾಡುವುದರ ಜೊತೆಗೆ ಬಂದ ಭಕ್ತರಿಗೆ ಅನ್ನ ಪ್ರಸಾದವನ್ನ ವಿತರಿಸಿ ಮಳೆರಾಯ ಬೇಗ ಬಾ ಅಂತಾ ವಿಶೇಷ ನಮನವನ್ನ ಸಲ್ಲಿಸಿದರು.

ಪ್ರತಿ ವರ್ಷ ಮೇ ತಿಂಗಳ ಕೊನೆಯ ವಾರ ಬಂದ್ರೆ ಸಾಕು. ರೈತರು ತಮ್ಮ ಹೊಲಗಳಲ್ಲಿನ ಕೃಷಿ ಚಟುವಟಿಕೆಗಳಲ್ಲಿ ಬ್ಯುಸಿ ಆಗುತ್ತಿದ್ದರು. ಆದರೆ ಈ ವರ್ಷ ಜೂನ್ ತಿಂಗಳ ಹೊಸ್ತಿಲಲ್ಲಿ ಮೃಗಶಿರ ಮಳೆ ಆರಂಭವಾದರು ಮಳೆರಾಯ ಬಾರದೆ ಇರುವುದರಿಂದ ಕಂಗಲಾದ ರೈತರು ಮಳೆಗಾಗಿ ಮೋಡದತ್ತ ಮುಖ ಮಾಡಿ ಕುಳಿತಿದ್ದಾರೆ. ಒಟ್ಟಿನಲ್ಲಿ ಮಳೆಗಾಗಿ ಕಪ್ಪೆಗಳ ಮೊರೆ ಹೋದ ಸುರಶೆಟ್ಟಿಕೊಪ್ಪದ ರೈತರ ಪ್ರಾರ್ಥನೆಗೆ ಮಳೆರಾಯ ಅಸ್ತು ಅಂತಾನಾ ಅನೋದನ್ನ ಕಾದು ನೋಡಬೇಕಿದೆ.

error: Content is protected !!