ಕೂಗು ನಿಮ್ಮದು ಧ್ವನಿ ನಮ್ಮದು

ನಾರಿಯರೇ ನಾಳೆಯಿಂದ ಬಸ್‌ನಲ್ಲಿ ಫ್ರೀಯಾಗಿ ಪ್ರಯಾಣಿಸಿ..! ಉಚಿತ ಖಚಿತವಾಗಿದೆ..

ಬೆಂಗಳೂರು : ಇಷ್ಟು ದಿನ ಉಚಿತ ಬಸ್‌ ಪ್ರಯಾಣಕ್ಕಾಗಿ ಕಾಯುತ್ತಿದ್ದ ಮಹಿಳೆಯರಿಗೆ ಕೊನೆಗೂ ಆ ದಿನ ಹತ್ತಿರ ಬಂದಿದೆ. ಎಲ್ಲರೂ 11ನೇ ದಿನಾಂಕ ಬರಲಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಅಂತ ಪ್ಲಾನ್‌ ಮಾಡಿಟ್ಟುಕೊಂಡು ಕುಳಿತಿದ್ದರು. ಇದೀಗ ಆ ದಿನಾಂಕ ಹತ್ತಿರವಾಗಿದ್ದು, ನಾಳೆ ಅಂದ್ರೆ ಜೂನ್‌ 11ರಿಂದ ಮಹಿಳೆಯರಿಗೆ ಬಸ್‌ ಪ್ರಯಾಣ ಉಚಿತವಾಗಲಿದೆ.

ಹೌದು.. ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿದರೆ 5 ಗ್ಯಾರಂಟಿಗಳನ್ನು ಜಾರಿಗೆ ತರುವುದಾಗಿ ಚುನಾವಣಾ ಸಂದರ್ಭದಲ್ಲಿ ಘೋಷಣೆ ಮಾಡಿತ್ತು. ಇದೀಗ ಒಂದೊಂದೆ ಯೋಜನೆಯನ್ನು ಕಾರ್ಯ ರೂಪಕ್ಕೆ ತರುತ್ತಿದೆ. ಇದೀಗ ಅವುಗಳಲ್ಲಿ ಒಂದಾದ ಶಕ್ತಿ ಯೋಜನೆ ನಾಳೆಯಿಂದ ಜಾರಿಗೆ ಬರಲಿದೆ. ಲೋಕಸಭೆ ಚುನಾವಣೆಯನ್ನು ಗುರಿಯಾಗಿಸಿ ಉಚಿತಗಳನ್ನು ಕಾಂಗ್ರೆಸ್‌ ಸರ್ಕಾರ ಖಚಿತಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜೂನ್‌ 11ರಂದು ಬೆಂಗಳೂರಿನಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡುತ್ತಿದೆ. ಅಂದು ವಿಧಾನ ಸೌಧದಲ್ಲಿ ಬೆಳಗ್ಗೆ 11:00 ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೊತೆಗೆ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನೂ ಅಹ್ವಾನಿಸಲಾಗಿದೆ.

ಕಾಂಗ್ರೆಸ್‌ನ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಏಕ‌ಕಾಲಕ್ಕೆ ಚಾಲನೆ ನೀಡಲಾಗುತ್ತದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಪ್ರಮುಖ ಗ್ಯಾರಂಟಿಗಳಲ್ಲಿ ಮೊದಲ ಗ್ಯಾರಂಟಿ ಜೂನ್ 11 ರಂದು ಮಹಿಳೆಯರಿಗೆ ಮಾತ್ರ ಸಮರ್ಪಣೆ ಆಗಲಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆ೦ಗಳೂರು ಮಹಾನಗರ ಸಾರಿಗೆ ಸ೦ಸ್ಥೆ (BMTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸ೦ಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಸಾರಿಗೆಗಳಲ್ಲಿ ಕರ್ನಾಟಕ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಇನ್ನು ಜುಲೈ 1ರಂದು ಮೈಸೂರಲ್ಲಿ ಅನ್ನಭಾಗ್ಯ ಯೋಜನೆ, ಆಗಸ್ಟ್‌ 1ರಂದು ಕಲಬುರಗಿಯಲ್ಲಿ ‘ಗೃಹಜ್ಯೋತಿ’ ಯೋಜನೆ, ಆಗಸ್ಟ್‌‌ 15ರಂದು ಬೆಳಗಾವಿಯ ಕಿತ್ತೂರಿನಲ್ಲಿ ‘ಗೃಹಲಕ್ಷ್ಮೀ’ ಮತ್ತು ಯುವನಿಧಿ ಯೋಜನೆಗೆ ಮಂಗಳೂರಿನಲ್ಲಿ ಚಾಲನೆ ನೀಡಲು ಸರ್ಕಾರ ನಿರ್ಧರಿಸಿದೆ.

error: Content is protected !!