ಚಿಕ್ಕೋಡಿ: ಬಟ್ಟೆ ತೊಳೆಯುಲು ಹೋಗಿದ್ದ ನಾಲ್ವರು ಸಹೋದರರು ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ
ಕೃಷ್ಣಾ ನದಿಯಲ್ಲಿ ನಾಲ್ವರು ಸಹೋದರರು ನೀರು ಪಾಲಾಗಿದ್ದಾರೆ.
ಗೋಪಾಲ ಬನಸುಡೆ (36), ಸದಾಶಿವ ಬನಸುಡೆ (24), ಶಂಕರ ಬನಸುಡೆ (20), ದರೇಪ್ಪ ಬನಸುಡೆ (22) ನೀರು ಪಾಲಾದ ದುರ್ದೈವಿಗಳಾಗಿದ್ದಾರೆ.
ಊರಲ್ಲಿ ಜಾತ್ರೆ ಎಂದು ನದಿಗೆ ಬಟ್ಟೆ ತೊಳೆಯಲು ಕುಟುಂಬ ಸಮೇತ ಬಂದಿದ್ದ ನಾಲ್ವರು ಸಹೋದರರು ನೀರು ಪಾಲಾಗಿದ್ದು ಊರಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಇನ್ನು ನದಿಗೆ ಬಟ್ಟೆ ತೊಳೆಯಲು ಹೋದಾಗ ಸದಾಶಿವ ಬನಸುಡೆ ಆಯ ತಪ್ಪಿ ನದಿಗೆ ಬಿದ್ದಿದ್ದ. ಸದಾಶಿವನನ್ನು ರಕ್ಷಣೆ ಮಾಡಲು ಹೋಗಿ ನಾಲ್ವರು ಸಹೋದರರು ನೀರು ಪಾಲಾಗಿದ್ದಾರೆ. ಸಧ್ಯ ನದಿಗೆ ಬಿದ್ದ ಸಹೋದರರಿಗಾಗಿ ಅಗ್ನಿಶಾಮಕ ಸಿಬ್ಬಂದಿ, ಸ್ಥಳಿಯ ಮೀನುಗಾರರು, ಈಜಿಗಾರರ ಸಹಾಯದಿಂದ ಅಥಣಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದು, ಮಕ್ಕಳು, ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.