ಕೂಗು ನಿಮ್ಮದು ಧ್ವನಿ ನಮ್ಮದು

ರೈತನ ಬದುಕು ಕಟ್ಟಿಕೊಟ್ಟಿರುವ ಶ್ರೀಮಂತ ಚಿತ್ರ ಬಿಡುಗಡೆ

ಹಾಸನ: ರೈತರ ಬದುಕು, ಬವಣೆ ತಿಳಿಸುವ ಹಾಗೂ ಗ್ರಾಮೀಣ ಆಟ, ಕಲೆಗಳ ಸಂಭ್ರಮ ನೆನಪಿಸುವ, ಕುಟುಂಬ ಸಮೇತ ನೋಡಬಹುದಾದ ಶ್ರೀಮಂತ ಕನ್ನಡ ಚಲನಚಿತ್ರ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಹಾಸನ ನಗರದಲ್ಲಿರುವ ಸಹ್ಯಾದ್ರಿ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಿದೆ ಎಂದು ಶ್ರೀಮಂತ ಚಲನಚಿತ್ರದ ಮುಖ್ಯಪಾತ್ರದಾರಿ ಮಂಜುನಾಥ್ ಹೇಳಿದರು. ಗೋಲ್ಡನ್ ರೈಸ್ ಮೂವೀಸ್ ಸಂಸ್ಥೆಯಡಿ ಪ್ರಥಮ ಬಾರಿಗೆ ಸ್ವತಂತ್ರವಾಗಿ ಶ್ರೀಮಂತ ಎಂಬ ಚಲನಚಿತ್ರವನ್ನು ನಿರ್ಮಿಸಲಾಗಿದೆ. ಈ ಸಿನಿಮಾದಲ್ಲಿ ರೈತರ ದೈನಂದಿನ ಬದುಕು ಬವಣೆ ಅನಾವರಣವಾಗಿದೆ.

ಇಡೀ ಜಗತ್ತಿನಲ್ಲಿ ರೈತನೇ ಅತೀ ದೊಡ್ಡ ಶ್ರೀಮಂತ ಎಂದು ಸಾಕ್ಷೀಕರಿಸುವ, ಮರೆಯಾಗುತ್ತಿರುವ ಹಳ್ಳಿಯ ಸುಗ್ಗಿ, ಜಾತ್ರೆ, ಹಬ್ಬ, ಹಾಡು, ಹಸೆ, ಹಳ್ಳಿ ಆಟಗಳು, ಗ್ರಾಮೀಣ ಕಲೆಗಳ ಸಂಭ್ರಮಗಳನ್ನು ನೆನಪಿಸುವುದರೊಂದಿಗೆ ಕರ್ನಾಟಕದ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಭ್ರಮಗಳನ್ನು ತಿಳಿ ಹಾಸ್ಯದ ಮೂಲಕ ಪ್ರೇಕ್ಷಕರನ್ನು ಮನರಂಜಿಸಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಸನ ರಮೇಶ ಅವರು ಸಿನಿಮಾಗೆ ಹಣ ಹೂಡಿ, ಅವರೇ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಾಲಿವುಡ್ ಖ್ಯಾತ ನಟ ಸೋನು ಸೂದ್ ಪ್ರಪ್ರಥಮ ಬಾರಿಗೆ ಕನ್ನಡ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ. ನಾಯಕಿಯರಾಗಿ ಮುಂಬೈ ಬೆಡಗಿ ವೈಷ್ಣವಿ ಪಟವರ್ಧನ್, ವೈಷ್ಣವಿ ಚಂದ್ರನ್ ಮೆನನ್ ಜತೆಗೆ ಕಲ್ಯಾಣ ಕರ್ನಾಟಕದ ಕ್ರಾಂತಿ ಎಂಬ ಯುವಪ್ರತಿಭೆಯನ್ನು ಮುಖ್ಯ ಭೂಮಿಕೆಯಲ್ಲಿ ಪರಿಚಯಿಸುತ್ತಿದ್ದೇವೆ.

ಹಿರಿಯ ಕಲಾವಿದರುಗಳಾದ ರಮೇಶ್ ಭಟ್, ರವಿಶಂಕರ್ ಗೌಡ, ಸಾಧು ಕೋಕಿಲ, ಚರಣ್ ರಾಜ್, ಕಲ್ಯಾಣಿ, ಗಿರಿ, ರಾಜು ತಾಳಿಕೋಟೆ, ಕುರಿಬಾಂಡ್ ರಂಗ, ಬ್ಯಾಂಕ್ ಮಂಜಣ್ಣ, ಬಸವರಾಜು ಹಾಸನ ಮುಂತಾದವರೊಂದಿಗೆ ಹಲವಾರು ಗ್ರಾಮೀಣ ರಂಗಭೂಮಿ ಕಲಾವಿದರು ಅಭಿನಯಿಸಿದ್ದಾರೆ ಎಂದು ಮಾಹಿತಿ ನೀಡಿದರು.


ಇದೊಂದು ಸಾಮುದಾಯಿಕ ಚಿತ್ರವಾಗಿದ್ದು, ಶೇಕಡ 70ರಷ್ಟು ಹಾಸನ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ. ನಾದಬ್ರಹ್ಮ ಡಾ. ಹಂಸಲೇಖ ಅವರ ಸಂಗೀತ ಸಾಹಿತ್ಯವಿದ್ದು, ರವಿಕುಮಾರ್ ಸನ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ, ಮದನ್-ಹರಿಣಿ ಹಾಗು ಮೋಹನ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಶ್ರೀಮಂತ ಚಿತ್ರವನ್ನು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವೀಕ್ಷಣೆ ಮಾಡುವುದರ ಮೂಲಕ ಕನ್ನಡ ಚಲನಚಿತ್ರ ಉಳಿಸಿ ಬೆಳೆಸುವಂತೆ ಮನವಿ ಮಾಡಿದರು. ಇದೇ ವೇಳೆ ಅಂತರಾಷ್ಟ್ರೀಯ ಮಾನವ ಹಕ್ಕುಗಳ ವೇದಿಕೆ ಜಿಲ್ಲಾಧ್ಯಕ್ಷ ಸಯ್ಯದ್ ಏಜಾಜ್, ರಾಜೇಶ್, ಕಲ್ಲೇಶ್, ಸತೀಶ್, ಹರೀಶ್, ಪವನ್, ರವಿ, ಹೇಮಂತ್ ಇತರರು ಉಪಸ್ಥಿತರಿದ್ದರು

error: Content is protected !!