ಬೆಳಗಾವಿ: ದೇವಸ್ಥಾನಗಳ ಅನುದಾನ ಬಿಡುಗಡೆಗೆ ತಡೆ ವಿಚಾರ ಮಾಜಿ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ಬಹಳಷ್ಟು ಮಹತ್ವ ಇದೆ. ನಮ್ಮ ಸರ್ಕಾರದಲ್ಲಿ ದೇವಸ್ಥಾನಗಳ, ಮಂದಿರಗಳ ಜೀರ್ಣೋದ್ಧಾರಕ್ಕಾಗಿ ಅನುದಾನ ಬಿಡುಗಡೆ ಮಾಡಿದ್ದೆವು. ಚುನಾವಣಾ ನೀತಿ ಸಂಹಿತೆ ಬಂದಿದ್ದ ಕಾರಣ ಎರಡನೇ ಕಂತು ಬಿಡುಗಡೆ ಆಗಿರಲಿಲ್ಲ.
ಆದರೆ ಈಗ ಕಾಂಗ್ರೆಸ್ ಸರ್ಕಾರ ಅನುದಾನ ತಡೆ ಹಿಡಿದಿರುವುದನ್ನು ಖಂಡಿಸುತ್ತೇನೆ. ಇದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಶಶಿಕಲಾ ಜೊಲ್ಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನ ಅಂದಾಗ ಯಾವುದೇ ಪಕ್ಷಪಾತ ಆಗಬಾರದು. ನಾವು ಮಂಜೂರಾತಿ ಮಾಡಿರುವುದನ್ನು ಬಿಡುಗಡೆ ಮಾಡುವುದು ಸರ್ಕಾರ ಮತ್ತು ಸಚಿವರ ಜವಾಬ್ದಾರಿ. ತಡೆ ಹಿಡಿದ ಆದೇಶವನ್ನು ಸರ್ಕಾರ ಹಿಂಪಡೆಯಬೇಕು. ರಾಜ್ಯದಲ್ಲಿರುವ ದೇವಾಲಯಗಳ ಜೀರ್ಣೋದ್ಧಾರ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ಸರ್ಕಾರ ಆದೇಶ ಹಿಂಪಡೆದು ಅನುದಾನ ಬಿಡುಗಡೆ ಮಾಡಿಲ್ಲದಿದ್ದರೆ ಸರ್ಕಾರದ ವಿರುದ್ಧ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಯಕ್ಸಂಬಾದ ನಿವಾಸದಲ್ಲಿ ಮಾತನಾಡಿದ್ದಾರೆ.