ಕೂಗು ನಿಮ್ಮದು ಧ್ವನಿ ನಮ್ಮದು

ಕಾಡಾನೆ ಸೆರೆಹಿಡಿದು ಪುನಃ ಬೇರೆ ಕಾಡಿಗೆ ಬಿಡುವ ಬದಲು ಆನೆ ಬಿಡಾರಕ್ಕೆ ಸ್ಥಳಾಂತರಿಸಲಿ ! ವೈಲ್ಡ್ ಟಸ್ಕರ್ ಸಂಸ್ಥೆ ನಡೆಸಿದ ಸಾಂಪ್ರಾದಾಯಿಕ ಅಧ್ಯಯನದಲ್ಲಿ ಮಾವುತರ ಅಭಿಪ್ರಾಯ ಮಂಡನೆ.. ಹೇಗಂತಿರಾ ಈ ಸ್ಟೋರಿ ನೋಡಿ.

ಇತ್ತಿಚ್ಚಿನ ದಿನಗಳಲ್ಲಿ ಕಾಡಾನೆ ಸೆರೆಯಾದ್ರೆ ಅವುಗಳನ್ನು ಪುನಃ ಕಾಡಿಗೆ ಬಿಡಲಾಗುತ್ತಿದೆ. ಮೊನ್ನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸೆರೆಹಿಡಿದ ಕಾಡಾನೆಯನ್ನು ಅರಣ್ಯಾಧಿಕಾರಿಗಳು ಪುನಃ ಕಾಡಿಗೆ ಬಿಟ್ಟಿದ್ದಾರೆ. ಇದು ಹಲವು ಮಜುಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆನೆಗಳ ಸಾಮ್ರಾಜ್ಯವಾಗಿರುವ ಕರ್ನಾಟಕ ರಾಜ್ಯದಲ್ಲಿ ಮಾನವ ಹಸ್ತಕ್ಷೇಪದ ಪರಿಣಾಮ ಇಂದು ಆನೆ ಕಾರಿಡಾರ್ ಗೆ ದೊಡ್ಡ ತೊಡಕಾಗಿದೆ. ಆನೆ ನಡೆದಾಡುವ ದಾರಿಯು ಕೃಷಿ ಭೂಮಿಯಾಗಿ ಪರಿವರ್ತನೆಯಾಗಿದೆ. ಕಾಡುಮೇಡುಗಳು ಕಾಫಿ ಟೀ ತೋಟಗಳಾಗಿ ಮಾರ್ಪಟ್ಟಿದೆ. ತಮ್ಮ ಸಾಮ್ರಾಜ್ಯದಲ್ಲಿ ಸ್ವಚ್ಚಂದವಾಗಿ ವಿಹರಿಸಲು ಸಾಧ್ಯವಾಗದೆ ಗಜಪಡೆ ಇಂದು ರೈತರ ತೋಟ ಗದ್ದೆಗಳಿಗೆ ಲಗ್ಗೆ ಇಡುತ್ತಿವೆ. ಪರಿಣಾಮ ಮಾನವ ಮತ್ತು ಆನೆ ನಡುವಿನ ಸಂಘರ್ಷದಿಂದಾಗಿ, ಸಾವುನೋವುಗಳಾಗಿವೆ. ರೈತರ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇದರ ನಡುವೆ ಆನೆಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ. ಆನೆ ನಡೆದಾಡುವ ಹಾದಿಯಲ್ಲಿ ಟ್ರಂಚ್ ನಿರ್ಮಿಸಲಾಗಿದೆ. ರೈಲು ಮಾರ್ಗ ಗಳಲ್ಲಿ ಕೂಡ ವೇಗಕ್ಕೆ ಕಡಿವಾಣ ಹಾಕಲಾಗಿದೆ.ರಾಷ್ಟ್ರೀಯ ಹೆದ್ದಾರಿಗಳಲ್ಲಿ ಷರತ್ತು ಬದ್ದ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮುಂದುವರೆದು, ಚಾಳಿಬಿದ್ದ ಕಾಡಾನೆಗಳು ರೈತರ ಹೊಲಗದ್ದೆಗಳಿಗೆ ಲಗ್ಗೆಯಿಟ್ಟಿರೆ, ಅವುಗಳನ್ನು ಸೆರೆಹಿಡಿದು,ಆನೆ ಬಿಡಾರದಲ್ಲಿ ಪಳಗಿಸಿ ಸಾಕಾನೆಗಳನ್ನಾಗಿ ಮಾಡಿಕೊಳ್ಳಲಾಗುತ್ತದೆ ಇಂತಹ ಸಾಕಾನೆಗಳನ್ನು ಕಾಡಾನೆ ಸೆರೆಹಿಡಿಯುವ ಇಲ್ಲವೇ ಇಲಾಖೆಯ ವಿವಿಧ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ.

ಬಿಡಾರದಲ್ಲಿ ಆನೆ ಸಾಕಲು ಅರಣ್ಯಾದಿಕಾರಿಗಳ ಹಿಂದೇಟು. ಕಾರಣವೇನು?

ಬಿಡಾರದಲ್ಲಿ ಒಂದು ಆನೆಗೆ ಮಾವುತ ಕಾವಾಡಿ ನೇಮಿಸಲಾಗುತ್ತೆ. ಇವರಿಗೆ ತಿಂಗಳ ವೇತನ ನೀಡಬೇಕು. ಕಾಡಾನೆಯನ್ನು ಸೆರೆಹಿಡಿದು ಅದನ್ನು ಪಳಗಿಸಿ, ಅದನ್ನು ಬಹುಕಾಲದವರೆಗೆ ಲಾಲನೆ ಪಾಲನೆ ಮಾಡುವುದು ಅರಣ್ಯ ಇಲಾಖೆಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ರಾಜ್ಯ ಸರ್ಕಾರ ಬಜೇಟ್ ನಲ್ಲಿ ಅರಣ್ಯ ಇಲಾಖೆಗೆ ಮೀಸಲಿಡುವ ಬಜೇಟ್ ಅರೆಕಾಸಿನ ಮಜ್ಜಿಗೆಯಂತಾಗಿದೆ. ಇದರ ನಡುವೆ ವನ್ಯಪ್ರಾಣಿಗಳ ಅಧ್ಯಯನದ ಹೆಸರಿನಲ್ಲಿ ರೇಡಿಯೋ ಕಾಲರ್ ಲಾಭಿ. ಇಷ್ಟು ವರ್ಷ ರೈತರ ಹೊಲಗಳಿಗೆ ಘೀಳಿಟ್ಟ ಕಾಡಾನೆಗಳನ್ನು ಸೆರೆಹಿಡಿದು ಬಿಡಾರಕ್ಕೆ ತರುತ್ತಿದ್ದ ಅರಣ್ಯಾಧಿಕಾರಿಗಳು ಇದ್ದಕ್ಕಿದ್ದಂತೆ ಪಥ ಬದಲಿಸಿ ಪುನಃ ಕಾಡಿಗೆ ಬಿಡುತ್ತಿದ್ದಾರೆ. ಇದರಲ್ಲಿ ಎನ್.ಜಿ.ಓ ಗಳ ಲಾಭಿಯನ್ನು ಅಲ್ಲಗಳೆಯುವಂತಿಲ್ಲ. ಸೆರೆಸಿಕ್ಕ ಆನೆಗೆ ರೇಡಿಯೋ ಕಾಲರ್ ಹಾಕಿ ಪುನಃ ಕಾಡಿಗೆ ಬಿಡಲಾಗುತ್ತೆ ಹೀಗಾಗಿ ಇತ್ತಿಚ್ಚಿನ ದಿನಗಳಲ್ಲಿ ಕಾಡಿನಲ್ಲಿ ಅರವಳಿಕೆ ನೀಡಿ ಸೆರೆಹಿಡಿದ ಆನೆಯನ್ನು ರೇಡಿಯೋ ಕಾಲರ್ ಅಳವಡಿಸಿ ಪುನಃ ಕಾಡಿಗೆ ಬಿಡುವ ಪ್ರಕ್ರೀಯೆಗೆ ಅರಣ್ಯ ಇಲಾಖೆ ಚಾಲನೆ ನೀಡಿದೆ. ಇತ್ತಿಚ್ಚೆಗೆ ಸೆರೆಸಿಕ್ಕ ನಾಲ್ಕು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ತಮಿಳುನಾಡು ಗಡಿಯ ಬಂಡಿಪುರ-ಮದುಮಲೈ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.ಕುಶಾಲನಗರದಲ್ಲಿ ಸೆರೆಹಿಡಿದ ಎರಡು ಆನೆ ರಾಮನಗರದಲ್ಲಿ ಸೆರೆಹಿಡಿದ ಒಂದು ಆನೆಯನ್ನು ಬಂಡಿಪುರಕ್ಕೆ ಬಿಡಲಾಗಿದೆ. ಸೆರೆಸಿಕ್ಕ ಕಾಡಾನೆಯನ್ನು ಪುನಃ ಕಾಡಿಗೆ ಬಿಡುವುದು ಒಳ್ಳೆಯದೋ ಅಥವಾ ಅದನ್ನು ಆನೆ ಬಿಡಾರದಲ್ಲಿ ಸಾಕುವುದು ಒಳ್ಳೆಯದೋ ? ಸೆರೆಸಿಕ್ಕ ಕಾಡಾನೆಯನ್ನು ಪುನಃ ಕಾಡಿಗೆ ಬಿಡುವುದು ಒಳ್ಳೆಯದೋ ಅಥವಾ ಅದನ್ನು ಆನೆ ಬಿಡಾರದಲ್ಲಿ ಸಾಕುವುದು ಒಳ್ಳೆಯದೋ ಎಂದು ಕೇಳಿದರೆ ಅನುಭವಿ ಮಾವುತರು ಹಾಗು ನುರಿತ ವನ್ಯಜೀವಿ ವೈದ್ಯರುಗಳು ಹೇಳುವುದೇ ಬೇರೆ. ಒಂದು ಕಾಡಾನೆ ಸೆರೆ ಹಿಡಿಯಬೇಕೆಂದರೆ ನಿರ್ಧಿಷ್ಟ ಕಾರಣವಿರಬೇಕಾಗುತ್ತೆ. ಅದು ಹಳ್ಳಿಗೆ ನುಗ್ಗಿ ಜನರಿಗೆ ತೊಂದರೆ ಕೊಡುವುದು ತೋಟ ಗದ್ದೆಗಳಿಗೆ ನಷ್ಟವನ್ನುಂಟು ಮಾಡಿದರೆ, ಸಾವುನೋವುಗಳಿಗೆ ಕಾರಣವಾಗಿದ್ರೆ ಮಾತ್ರ ಅಂತ ಆನೆಯನ್ನು ಜನರ ಒತ್ತಡದ ಮೇರೆಗೆ ಸೆರೆ ಹಿಡಿಯಲಾಗುತ್ತೆ. ನಂತರ ಸೆರೆಸಿಕ್ಕ ಆನೆಯನ್ನು ಆನೆ ಬಿಡಾರಕ್ಕೆ ಕರೆತರಬೇಕು. ಆದ್ರೆ ಕ್ಯಾಂಪಿಗೆ ತಂದರೆ ಇಬ್ಬರಿಗೆ ಕೆಲಸ ಕೊಡಬೇಕು ಅಲ್ಲದೆ ಆನೆ ಜೀವಿತಾವಿಧಿಯವರೆಗೆ ಸಾಕಬೇಕು. ಇದರ ಆರ್ಥಿಕ ಭಾರದಿಂದ ತಪ್ಪಿಸಿಕೊಳ್ಳುವ ಜಾಣತನವನ್ನು ಅರಣ್ಯ ಇಲಾಖೆ ಪ್ರದರ್ಶಿಸುತ್ತಿದೆ.

ಈ ಹಿಂದೆ ಸೆರೆಸಿಕ್ಕ ಆನೆಗಳನ್ನು ಪುನಃ ಕಾಡಿಗೆ ಬಿಟ್ಟ ಆನೆಗಳು ಏನಾದ್ವು ಕಳೆದ ಒಂದುವರೆ ವರ್ಷದ ಹಿಂದೆ ಕುಶಾಲನಗರದಲ್ಲಿ ಸೆರೆಹಿಡಿದ ಆನೆಯನ್ನು ರೇಡಿಯೋ ಕಾಲರ್ ಅಳವಡಿಸಿ ನಾಗರಹೊಳೆಗೆ ಬಿಟ್ಟ ಸಂದರ್ಭದಲ್ಲಿ ಆ ಕಾಡಾನೆ ಮತ್ತೆ ವಾಪಸ್ಸಾಗಿ ಜನರಿಗೆ ತೊಂದರೆ ಕೊಡಲು ಶುರು ಮಾಡಿತು. ನಂತರ ಮತ್ತೆ ಪುನಃ ಕಾಡಾನೆಯನ್ನು ಸೆರೆಹಿಡಿದು ಕ್ರಾಲ್ ನಲ್ಲಿ ಬಂಧಿಸಲಾಯಿತು. ವಿಪರ್ಯಾಸ ಎಂದರೆ ಮತ್ತೆ ಕ್ರಾಲ್ ನಲ್ಲಿದ್ದ ಆನೆಯನ್ನು ಒಂದು ತಿಂಗಳ ಸಾಕಿ ನಂತರ ಕಾಡಿಗೆ ಬಿಡಲಾಯಿತು. ಕಾಡು ಸೇರಿದ ಆನೆ ನಂತರ ದಾರುಣವಾಗಿ ಸಾವು ಕಂಡಿತು. ಒಂದು ಗಂಡಾನೆಯನ್ನು ಸೆರೆ ಹಿಡಿದಾಗ ಅದನ್ನು ಬೇರೆ ಕಾಡಿಗೆ ಸ್ಥಳಂತರಿಸುವುದು ವೈಜ್ಞಾನಿಕವಾಗಿ ಸರಿಯಾದ ಕ್ರಮವಲ್ಲ. ಆನೆ ತಮ್ಮದೆ ಆದ ಹಿಂಡಿನಲ್ಲಿ ತಮ್ಮದೇ ಆದ ಪಥದಲ್ಲಿ ಸಂಚರಿಸುತ್ತಾ ಜೀವಿಸುವ ಪ್ರಾಣಿ. ತನ್ನ ಸರಹದ್ದು ತೊರೆದು ಬೇರೆ ಸರಹದ್ದಿಗೆ ಹೋದಾಗ ಅಲ್ಲಿ ಬೇರೆ ಕಾಡಾನೆಯೊಂದಿಗೆ ಗಜ ಕಾಳಗ ನಡೆದು ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತೆ. ಜನರಿಗೆ ತೊಂದರೆ ಕೊಡುವ ಒಂದು ಕಾಡಾನೆ ಗ್ರಾಮದಂಚಿನ ತೋಟಗಳಿಗೆ ಬರುವುದು,ಬೆಳೆ ಹಾನಿ ಮಾಡುವುದನ್ನು ಖಯಾಲಿಯನ್ನಾಗಿ ಮಾಡಿಕೊಂಡುತ್ತವೆ. ಇಂತಹ ಆನೆಯನ್ನು ಸೆರೆ ಹಿಡಿದು ಪುನಃ ಕಾಡಿಗೆ ಬಿಟ್ಟರೂ, ಅವು ಮತ್ತೆ ನಾಡಿನತ್ತ ಮುಖ ಮಾಡುತ್ತೆ. ಹೀಗಾಗಿ ಸೆರೆಹಿಡಿದ ಕಾಡಾನೆಯನ್ನು ಆನೆ ಬಿಡಾರಕ್ಕೆ ತಂದು ಸಾಕುವುದೇ ಲೇಸು. ರೇಡಿಯೋ ಕಾಲರ್ ಆನೆಗಳಿಗೆ ಉಪಯೋಗವಿಲ್ಲ ಸೆರೆಸಿಕ್ಕ ಆನೆಯನ್ನು ಪುನಃ ಕಾಡಿಗೆ ಬಿಡುವಾಗ ಇತ್ತಿಚ್ಚೆಗೆ ರೇಡಿಯೋ ಕಾಲರ್ ಅಳವಡಿಸಲಾಗುತ್ತೆ.ಕಾಡು ಸೇರಿದ ಆನೆಯ ಚಲನ ವಲನವನ್ನು ದಾಖಲು ಮಾಡಲಾಗುತ್ತದೆ. ಅದು ಪುನಃ ಕಾಡಂಚಿನ ಗ್ರಾಮಗಳತ್ತ ಬರುತ್ತಿದ್ದರೆ ಗ್ರಾಮಸ್ಥರನ್ನು ಎಚ್ಚರಿಸಿ, ಆಗುವ ಅನಾಹುತ ಬೆಳೆಯನ್ನು ತಪ್ಪಿಸಬಹುದು. ನಿಜ ಈ ಸೆರೆಸಿಕ್ಕ ಆನೆಗಳನ್ನು ಬಂಡಿಪುರ ಮದುಮಲೈ ಗಡಿಯ ಕಾಡಿನಲ್ಲಿ ಬಿಡಲು ನಿರ್ಧರಿಸಲಾಗಿದ್ದು, ರಾಜ್ಯದಲ್ಲಿ ಎಲ್ಲೇ ಆನೆ ಸೆರೆಹಿಡಿಯಲ್ಪಟ್ಟರೂ, ಅವುಗಳಿಗೆ ಬಿಂಡಿಪುರ ಕಾಡು ಆಶ್ರಯವಾಗಿದೆ. ಆದ್ರೆ ರೇಡಿಯೋ ಕಾಲರ್ ನಿಂದ ಕೂಡ ಆನೆಗೆ ತೊಂದರೆಯಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸುಮಾರು 2 ರಿಂದ 3 ಲಕ್ಷ ಬೆಲೆ ಬಾಳುವ ಸುಮಾರು 25 ಕೇಜಿ ತೂಗುವ ರೇಡಿಯೋ ಕಾಲರ್ ಅಳವಡಿಸಿದರೆ, ಇದರಿಂದ ಯಾರಿಗೆ ಲಾಭ ಯಾವುದಕ್ಕೆ ನಷ್ಟ ಎಂಬುದು ಅರಿವಾಗುತ್ತದೆ. ತನ್ನ ಮೇಲಿರುವ ಭಾರದಿಂದ ಆನೆ ಮತ್ತಷ್ಟು ವಿಚಲಿತವಾಗುತ್ತೆ. ಬಿಡಾರದಲ್ಲಿ ಆನೆಗಳಿಗೆ ಸರಪಳಿ ಹಾಕಿದ್ದರೂ ಆಗ್ಗಾಗ್ಗೆ ಅವುಗಳ ಭಾರವನ್ನು ಮಾವುತರು ತಗ್ಗಿಸುತ್ತಾರೆ.

ಮಳೆಗಾಲ ಪ್ರಾರಂಭವಾದರೆ, ರೇಡಿಯೋ ಕಾಲರ್ ಅಳವಡಿಸಿದ ಆನೆ ಹಿಂಸೆಯನ್ನೇ ಅನುಭವಿಸುತ್ತೆ. ಕುತ್ತಿಗೆ ಭಾಗದಲ್ಲಿ ಗಾಯದಂತಾಗುತ್ತದೆ. ಆನೆ ಸೊಂಡಿಲಿನಿಂದ ನೀರು ಕುಡಿಯಲು ಸಾಧ್ಯವಾಗುವುದಿಲ್ಲ.ಆನೆ ತನ್ನ ಕುತ್ತಿಗೆಯನ್ನು ಮರಕ್ಕೆ ತಿಕ್ಕಿದರೂ ರೇಡಿಯೋ ಕಾಲರ್ ಗೆ ಹಾನಿಯಾಗುತ್ತೆ. ಕುತ್ತಿಗೆಗೆ ಹಾಕಿದ ಕಾಲರ್ ಕೊರೆದು ಕೊರೆದು ಆನೆಗೆ ಗಾಯಗಳಾಗಿ ಆನೆ ಸಾಯುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ರೇಡಿಯೋ ಕಾಲರ್ ಅಳವಡಿಸಿದ ಎರಡು ಆನೆಗಳು ಸಾವನ್ನಪ್ಪಿದೆ ಎನ್ನಲಾಗಿದ್ದು, ಸತ್ಯ ಘಟನೆ ಮಾತ್ರ ಕಾಡಿನ ರಹಸ್ಯವಾಗಿದೆ. ಇನ್ನು ರೇಡಿಯೋ ಕಾಲರ್ ಗೆ ಅಳವಡಿಸಿದ ಬ್ಯಾಟರಿ ಲೈಫ್ ಅಬ್ಬಬ್ಬಾ ಅಂದ್ರೂ ಒಂದು ತಿಂಗಳು ಬಂದರೂ ಹೆಚ್ಚು. ಬ್ಯಾಟರಿ ಇರುವಷ್ಟು ದಿನ ಜಿಪಿಎಸ್ ನಲ್ಲಿ ಆನೆಯ ದಿನದ ಚಲನ ವಲನ ದಾಖಲು ಮಾಡಬಹುದು. ಆದ್ರೆ ಬ್ಯಾಟರಿ ಲೈಫ್ ಮುಗಿದ ನಂತರ ಆನೆಗೂ ಅರಣ್ಯ ಇಲಾಖೆಗೂ ಸಂಬಂಧವೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗುತ್ತೆ. ಯಾಕೆಂದ್ರೆ 2010 ರಲ್ಲಿ ಹಾಸನ ಜಿಲ್ಲೆಯಲ್ಲಿ ಸೆರೆಹಿಡಿದ ಕಾಡಾನೆಯನ್ನು ರೇಡಿಯೋ ಕಾಲರ್ ಅಳವಡಿಸಿ ಬಂಡಿಪುರ ರಾಷ್ಟ್ರೀಯ ಉದ್ಯಾನದ ಬಳಿ ಬಿಡಲಾಗಿತ್ತು. ಆದರೆ ಆ ಆನೆ 2014 ರಲ್ಲಿ ಪುನಃ ಹಾಸನ ಜಿಲ್ಲೆಯ ತನ್ನ ನೆಲದಲ್ಲಿಯೇ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿತ್ತು.

ಸಕ್ರೆಬೈಲಿನಲ್ಲಿ ನಾಲ್ಕು ಕ್ರಾಲ್ ಗಳು ಖಾಲಿಯಿದೆ.
ರಾಜ್ಯದಲ್ಲಿ ಆರು ಸಾವಿರಕ್ಕೂ ಅಧಿಕ ಆನೆಗಳಿವೆ. ಅವುಗಳು ಸ್ವಚ್ಚಂದವಾಗಿ ಕಾಡಿನಲ್ಲಿವೆ. ಇವುಗಳಲ್ಲಿ ಬೆರಳೆಣಿಕೆಯಷ್ಟು ಆನೆಗಳು ಮಾತ್ರ ವಿವಿಧ ಕಾರಣಗಳಿಗೆ ಮನುಷ್ಯರಿಗೆಗೆ ಕಂಟಕ ಪ್ರಾಯವಾಗಿದೆ. ಹೀಗಾಗಿ ತೊಂದರೆ ತಾಪತ್ರಯಗಳನ್ನು ಎಸಗುವ ಕಾಡಾನೆಗಳನ್ನು ಸೆರೆಹಿಡಿದಾಗ ಅದನ್ನು ಪುನಃ ಕಾಡಿಗೆ ಬಿಡುವುದರಿಂದ ಒಳಿತಿಗಿಂತ ಕೆಡಕು ಹೆಚ್ಚು. ಕೇವಲ ಅಧ್ಯಯನ ಸಂಶೋಧನೆ ಹೆಸರಿನಲ್ಲಿ ರೇಡಿಯೋ ಕಾಲರ್ ಗುಮ್ಮ ಬಿಟ್ಟು ಆನೆಗಳ ಬದುಕನ್ನು ಕಸಿದುಕೊಳ್ಳುವುದು ಯಾವ ನ್ಯಾಯ. ಆದ್ದರಿಂದ ಸೆರೆಹಿಡಿದ ಕಾಡಾನೆಯನ್ನು ತನಗೆ ಗೊತ್ತು ಪರಿಚಯವಿಲ್ಲದ ಕಾಡಿನಲ್ಲಿ ಬಿಟ್ಟರೆ ಅನಾಹುತಗಳು ಹೆಚ್ಚು. ಅವು ಪುನ ನಾಡಿನತ್ತ ಮುಖ ಮಾಡಿದ್ರೆ ಅಥವಾ ಸಾವನ್ನಪ್ಪಿದ್ರೆ ಇದರಿಂದ ಇಲಾಖೆಗೆ ದೊಡ್ಡ ನಷ್ಟ.ಆನೆ ಕಾರ್ಯಾಚರಣೆಗೆ ಲಕ್ಷಾಂತರ ರೂಪಾಯಿ ಖರ್ಚಾಗಿರುತ್ತೆ. ಹಲವು ಮಂದಿಯ ಶ್ರಮವಿರುತ್ತೆ. ಇದೆಲ್ಲಾ ಹೊಳೆಯಲ್ಲಿ ಹುಳಿಹಿಂಡಿದಂತಾಗುತ್ತೆ.
ಮುಂದಿನ ದಿನಗಳಲ್ಲಿ ಕಾಡಾನೆ ಸೆರೆಹಿಡಿಯಲು ಸಾಕಾನೆಗಳು ಸಿಗೋದಿಲ್ಲ..ಮಾವುತರು ಸಿಗೋದಿಲ್ಲ ಹೀಗಾಗಿ ಸೆರೆಹಿಡಿದ ಆನೆಯನ್ನು ಬಿಡಾರದ ಕ್ರಾಲ್ ನಲ್ಲಿ ಪಳಗಿಸಿ, ಇಲಾಖೆಯ ಕಾರ್ಯಗಳಿಗೆ ಬಳಸಿಕೊಳ್ಳುವುದೇ ಸೂಕ್ತ. ಸಕ್ರೆಬೈಲಿನಲ್ಲಿ ಈಗ ನಾಲ್ಕು ಕ್ರಾಲ್ ಗಳು ಖಾಲಿ ಇದೆ. ಆನೆ ಪಳಗಿಸಲು ನುರಿತ ಮಾವುತರಿದ್ದಾರೆ. ಅನುವಂಶೀಯವಾಗಿ ಬಂದ ಪಾರಂಪಾರಿಕ ಸಂಪ್ರಾದವಿದೆ, ಇನ್ನು ಮುಂದೆ ಆನೆಗಳನ್ನು ಕಾಡಿಗೆ ಮಾತ್ರ ಬಿಡಲಾಗುತ್ತದೆ ಎಂದು ಅರಣ್ಯ ಇಲಾಖೆ ಕಠೋರ ನಿರ್ಧಾರ ತಾಳಿದರೆ ಅದು ಮಾವುತ ಪರಂಪರೆಯ ವಿನಾಶಕ್ಕೆ ನಾಂದಿ ಹಾಡಿದಂತಾಗುತ್ತೆ. ಒಂದು ಬುಡಕಟ್ಟು ಸಮುದಾಯದ ನಾಶಕ್ಕೆ ಕಾರಣವಾಗುತ್ತೆ. ರಾಜ್ಯದಲ್ಲಿ ಈಗ ಬಿಡಾರದಲ್ಲಿರುವ ಆನೆಗಳ ಸಂಖ್ಯೆ ನೂರರ ಗಡಿ ದಾಟೋದಿಲ್ಲ. ಇವುಗಳಲ್ಲಿ ಕಾಡಾನೆ ಸೆರೆಹಿಡಿಯಲು ಅಭಿಮನ್ಯು ಆನೆ ತಂಡದಿಂದ ಮಾತ್ರ ಸಾಧ್ಯವಿದೆ. ಅಭಿಮನ್ಯು ನಂತರ ಮುಂದಿನ ದಿನಗಳಲ್ಲಿ ಕಾಡಾನೆ ಸೆರೆಹಿಡಿಯಲು ಸಾಕಾನೆಗಳಿಗೆ ತರಬೇತಿ ನೀಡಿಲ್ಲ. ಅನುಭವಿ ಮಾವುತರು ನಿವೃತ್ತಿಯಾಗುತ್ತಿದ್ದಾರೆ. ಬಿಡಾರದಲ್ಲಿ ವಯಸ್ಸಾದ ಆನೆಗಳು ಸಾವನ್ನಪ್ಪುತ್ತಿವೆ. ಆನೆಗಳನ್ನು ನಂಬಿ ಬದುಕು ಕಟ್ಟಿಕೊಂಡಿರುವ ಮಾವುತ ಸಂತತಿ ಮೇಲೆ ಕರಿ ಛಾಯೆ ಆವರಿಸತೊಡಗಿದೆ. ಪರಿಸ್ಥಿತಿ ಹೀಗಿರುವಾಗ ಮುಂದಿನ ದಿನಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾದ್ರೆ..,ಅವುಗಳನ್ನು ಸೆರೆಹಿಡಿಯಲು ಬಿಡಾರದ ಆನೆಗಳು ಇಲ್ಲದಂತಾಗುತ್ತೆ. ಮಾವುತರು ಕೂಡ ಇಲ್ಲದಂತಾಗುತ್ತೆ. ಆಗ ಅರಣ್ಯ ಇಲಾಖೆ ಕಾಡಾನೆ ಸೆರೆಹಿಡಿಯಲು ಜೆಸಿ, ಹಿಟಾಚಿ ಬಳಸಲು ಸಾಧ್ಯವೇ ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಆನೆಗಳಿಂದ ಜನರಿಗೆ ತೊಂದರೆಯಾಗುತ್ತಿದೆ. ಇಂತಹ ಆನೆಗಳಿಗೆ ಆನೆ ಬಿಡಾರವೇ ಸೂಕ್ತ ಜಾಗವೆಂದು ವೈಲ್ಡ್ ಟಸ್ಕರ್ ಸಾಂಪ್ರಾದಾಯಿಕವಾಗಿ ನಡೆಸಿದ ಅಧ್ಯಯನದಿಂದ ಅಭಿಪ್ರಾಯ ವ್ಯಕ್ತಪಡಿಸಿದೆ.

ಲೇಖಕರು.
ಪಿ.ಜೇಸುದಾಸ್.
ವೈಲ್ಡ್ ಟಸ್ಕರ್ ಸಕ್ರೆಬೈಲು
ನಿರ್ದೇಶಕರು.

error: Content is protected !!