ಮಂಗಳೂರು: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ದುರಂತ ಸಂಭವಿಸಿ ಇಂದಿಗೆ 13 ವರ್ಷ ಕಳೆದಿದೆ. ಹೀಗಾಗಿ ದುರಂತದಲ್ಲಿ ಮೃತಪಟ್ಟವರಿಗೆ ದ.ಕ ಜಿಲ್ಲಾಡಳಿತದಿಂದ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಗುರುತು ಪತ್ತೆಯಾಗದ ಮೃತದೇಹ ದಹನ ಮಾಡಿದ ಮಂಗಳೂರು ನಗರದ ಕುಳೂರಿನಲ್ಲಿರುವ ಫಲ್ಗುಣಿ ನದಿ ಕಿನಾರೆ ಬಳಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ದುರಂತದಲ್ಲಿ ಮೃತರಾದ ಕುಟುಂಬ ಸದಸ್ಯರು, ದ.ಕ ಜಿಲ್ಲಾಧಿಕಾರಿ ಎಂ.ಆರ್ ರವಿಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. ಸಂತ್ರಸ್ಥರ ನೆನಪಿನ ಪಾರ್ಕ್ನಲ್ಲಿ ಹೂಗುಚ್ಚ ಅರ್ಪಿಸಿ ಶ್ರದ್ಧಾಂಜಲಿ ಅರ್ಪಿಸಲಾಗಿದೆ.
2010ರ ಮೇ 22ರಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ದುರಂತ ಸಂಭವಿಸಿತ್ತು. ಈ ದುರಂತದಲ್ಲಿ 158 ಮಂದಿ ಮೃತಪಟ್ಟಿದ್ದರು. ಹಾಗೂ ಕೇವಲ 8 ಮಂದಿ ಮಾತ್ರ ಬದುಕುಳಿದಿದ್ದರು. ಇನ್ನೂ ಈ ದುರಂತದಲ್ಲಿ ಮೃತಪಟ್ಟವರ ಪೈಕಿ ಅನೇಕರ ಮೃತದೇಹದ ಗುರುತು ಪತ್ತೆಯಾಗಿರಲಿಲ್ಲ, ಅವುಗಳನ್ನು ಕೂಳೂರಿನ ಫಲ್ಗುಣಿ ನದಿ ಕಿನಾರೆಯಲ್ಲಿ ಸಂಸ್ಕಾರ ಮಾಡಲಾಗಿತ್ತು. ಅದೇ ಜಾಗದಲ್ಲೀಗ ಸಂತ್ರಸ್ತರ ನೆನಪಿನ ಪಾರ್ಕ್ ನಿರ್ಮಿಸಲಾಗಿದ್ದು ಇಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾಡಳಿತ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಗಿದೆ.
13 ವರ್ಷಗಳ ಹಿಂದೆ ಈ ದಿನ ನಡೆದದ್ದೇನು?
2010ರ ಮೇ 22ರಂದು ಬೆಳಗ್ಗೆ 6.20ರ ವೇಳೆ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಲ್ಯಾಂಡಿಂಗ್ ಮಾಡುವ ವೇಳೆ ನಿಯಂತ್ರಣ ಕಳೆದುಕೊಂಡು ಕೆಂಜಾರಿನ ಗುಡ್ಡದಿಂದ ಕೆಳಜಾರಿ ಪತನಗೊಂಡಿತ್ತು. ಕೂಡಲೆ ವಿಮಾನ ಪೂರ್ತಿ ಅಗ್ನಿ ಆವರಿಸಿ ಅದರಲ್ಲಿದ್ದ 158 ಮಂದಿ ಸಜೀವ ದಹನವಾಗಿದ್ದರು. ಅದೃಷ್ಟವಶಾತ್ ಕೇವಲ 8 ಮಂದಿಯಷ್ಟೇ ಬದುಕುಳಿದಿದ್ದರು.
ಇನ್ನು ಈ ಭೀಕರ ದುರಂತದಲ್ಲಿ ಶಾಶ್ವತವಾಗಿ ಕಣ್ಣುಮುಚ್ಚಿದವರ ಕುಟುಂಬಸ್ಥರಿಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಒದಗಿಸುವುದಕ್ಕಾಗಿ ಕಂಪನಿಯು ಮುಂಬೈನ ಕಾನೂನು ತಜ್ಞ ಎಚ್.ಡಿ. ನಾನಾವತಿ ನೇತೃತ್ವದ ಸಂಸ್ಥೆಯನ್ನು ನೇಮಿಸಿತ್ತು. ಈ ಸಂಸ್ಥೆ ಸುಮಾರು 147 ಕುಟುಂಬಗಳಿಗೆ ಪರಿಹಾರ ಒದಗಿಸಿರುವುದಾಗಿ ಹೇಳಿಕೊಂಡಿತ್ತು. ಇದರಲ್ಲಿ ಗರಿಷ್ಠ ಎಂದರೆ 7.7 ಕೋಟಿ ರು. ಪಡೆದವರೂ ಇದ್ದರು. ಆದರೆ ಪರಿಹಾರದ ಮೊತ್ತದ ಬಗ್ಗೆ ಅನೇಕ ಕುಟುಂಬದವರು ಆಕ್ಷೇಪವೆತ್ತಿದ್ದರು. ಇನ್ನೂ ಸುಮಾರು 45 ಕುಟುಂಬದವರು ಕಾನೂನು ಹೋರಾಟದಲ್ಲಿದ್ದಾರೆ. ಈ ನಡುವೆ ಏರ್ ಇಂಡಿಯಾವನ್ನು ಟಾಟಾ ಸಮೂಹ ಸಂಸ್ಥೆ ಖರೀದಿಸಿದೆ.