ನಟ ಸೃಜನ್ ಲೋಕೇಶ್ ಅವರು ನಟನಾಗಿ, ರಿಯಾಲಿಟಿ ಶೋ ಜಡ್ಜ್ ಹಾಗೂ ನಿರೂಪಕನಾಗಿ ಗಮನ ಸೆಳೆದಿದ್ದಾರೆ. ಅವರ ಖ್ಯಾತಿ ದಿನಕಳೆದಂತೆ ಹೆಚ್ಚುತ್ತಲೇ ಇದೆ. ಅವರು ವೇದಿಕೆ ಏರಿದರು ಎಂದರೆ ಅಲ್ಲಿ ನಗು ಗ್ಯಾರಂಟಿ. ಈಗ ಅವರು ಫ್ಯಾಮಿಲಿ ಗ್ಯಾಂಗ್ ಕಟ್ಟಿಕೊಂಡು ಬರುತ್ತಿದ್ದಾರೆ. ಅರ್ಥಾತ್ ಕಲರ್ಸ್ ಕನ್ನಡದಲ್ಲಿ ಆರಂಭ ಆಗುತ್ತಿರುವ ಹೊಸ ರಿಯಾಲಿಟಿ ಶೋ ‘ಫ್ಯಾಮಿಲಿ ಗ್ಯಾಂಗ್ಸ್ಟಾರ್ಸ್’ಗೆ ಸೃಜನ್ ಲೋಕೇಶ್ ನಿರೂಪಣೆ ಇರಲಿದೆ. ಕಲರ್ಸ್ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಪ್ರೋಮೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಮೆಚ್ಚುಗೆ ಪಡೆದಿದೆ.
ಇತ್ತೀಚೆಗೆ ಸೃಜನ್ ಲೋಕೇಶ್ ಅವರು ನಿರೂಪಣೆಗಿಂತ ಜಡ್ಜ್ ಆಗಿಯೇ ಕಾಣಿಸಿಕೊಂಡಿದ್ದರು. ಇದೇ ಥೀಮ್ನಲ್ಲಿ ಹೊಸ ಪ್ರೋಮೋ ಮೂಡಿಬಂದಿದೆ. ಸೃಜನ್ ಲೋಕೇಶ್ ಅವರನ್ನು ಕೆಲವರು ಕಿಡ್ನ್ಯಾಪ್ ಮಾಡಿ ಕುರ್ಚಿಮೇಲೆ ಕಟ್ಟಿರುತ್ತಾರೆ. ‘ಟಾಕಿಂಗ್ ಸ್ಟಾರ್ ಸೈಲೆಂಟ್ ಮೂಡ್ನಲ್ಲಿದ್ದಾರೆ. ಜಡ್ಜ್ ಆಗಿ ಕೂತಿದ್ದಾರಲ್ಲ, ಅಷ್ಟೇ ಮುಗೀತು ಇನ್ನು ನಿಲ್ಲೋಕೆ ಆಗಲ್ಲ’ ಎನ್ನುತ್ತಾರೆ ಕಿಡ್ನ್ಯಾಪರ್ಸ್.
ಇದೇ ಸಮಯಕ್ಕೆ ಸೃಜನ್ ಲೋಕೇಶ್ಗೆ ಕರೆ ಬರುತ್ತದೆ. ‘ಫ್ಯಾಮಿಲಿ ಕಾಲಿಂಗ್, ಒಂದೇ ಒಂದು ಬಾರಿ ಮಾತಾಡ್ತೀನಿ’ ಎನ್ನುತ್ತಾರೆ. ಕರೆ ಸ್ವೀಕರಿಸುತ್ತಿದ್ದಂತೆ ಕಲರ್ಸ್ ಕನ್ನಡ ಸೀರಿಯಲ್ ಜೋಡಿಗಳ ಎಂಟ್ರಿ ಆಗುತ್ತದೆ. ಅವರು ಬಂದು ಸೃಜನ್ನ ಬಚಾವ್ ಮಾಡುತ್ತಾರೆ. ‘ನಾನು ಒಬ್ನೇ ಬಂದ್ರೆ ಹಾವಳಿ, ಇನ್ನು, ಫ್ಯಾಮಿಲಿ ಕಟ್ಟಿಕೊಂಡು ಬರ್ತಿದೀನಿ. ಇನ್ನು ನಿತ್ಯ ದೀಪಾವಳಿ’ ಎಂದು ಸೃಜನ್ ಡೈಲಾಗ್ ಹೊಡೆಯುತ್ತಾರೆ.
ಕಲರ್ಸ್ ಸಂಸಾರಗಳ ಕಲರ್ಫುಲ್ ಹಣಾಹಣಿ… ಫ್ಯಾಮಿಲಿ ಗ್ಯಾಂಗ್ಸ್ಟಾರ್ಸ್’ ಎಂದು ಈ ಪ್ರೋಮೋಗೆ ಕ್ಯಾಪ್ಶನ್ ಈಡಲಾಗಿದೆ. ಇದು ರಿಯಾಲಿಟಿ ಗೇಮ್ಶೋ. ‘ಲಕ್ಷ್ಮೀ ಬಾರಮ್ಮ’, ‘ತ್ರಿಪುರ ಸುಂದರಿ’, ‘ಭಾಗ್ಯ ಲಕ್ಷ್ಮೀ’ ಮೊದಲಾದ ಸೀರಿಯಲ್ಗಳ ಕಾಲವಿದರು ರಿಯಾಲಿಟಿ ಗೇಮ್ ಶೋನಲ್ಲಿ ಭಾಗಿ ಆಗಲಿದ್ದಾರೆ. ಈ ಶೋ ಯಾವ ರೀತಿಯಲ್ಲಿ ಮೂಡಿಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಈ ಪ್ರೋಮೋ ವೀಕ್ಷಕರಿಗೆ ಇಷ್ಟವಾಗಿದೆ. ಸೋಶಿಯಲ್ ಮೀಡಿಯಾ ಪೇಜ್ನಲ್ಲಿ ಹಂಚಿಕೊಂಡ ವಿಡಿಯೋಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕಲರ್ಸ್ ಕನ್ನಡ ಧಾರಾವಾಹಿ ಕಲಾವಿದರನ್ನು ಒಂದೇ ವೇದಿಕೆ ಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ. ಇದರ ಪ್ರಸಾರ ದಿನಾಂಕ ಇನ್ನಷ್ಟೇ ಅನೌನ್ಸ್ ಆಗಬೇಕಿದೆ