ಹೊಸದೆಹಲಿ: ಭಾರಿ ಹೈಡ್ರಾಮಾದ ನಡುವೆ, ಅಬಕಾರಿ ನೀತಿ ಅಕ್ರಮ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ರಾತ್ರಿ ಬಂಧಿಸಿದ್ದಾರೆ.
ದೆಹಲಿ ಅಬಕಾರಿ ನೀತಿ ಅಕ್ರಮಕ್ಕೆ ಸಂಬಂಧಿಸಿದಂತೆ 9 ಬಾರಿ ಜಾರಿ ನಿರ್ದೇಶನಾಲಯದ ಸಮನ್ಸ್‌ಗೆ ಸೆಡ್ಡು ಹೊಡೆದು ಡೊಂಟ್ ಕೇರ್ ಅಂದಿದ್ದ ಅರವಿಂದ ಕೇಜ್ರಿವಾಲ್ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ಇಂದು ಕೋರ್ಟ್ ನಿರಾಕರಿಸಿದ ಹಿನ್ನೆಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸರ್ಚ್ ವಾರೆಂಟ್‌ನೊಂದಿಗೆ ಅರವಿಂದ್ ಕೇಜ್ರಿವಾಲ್ ಮನೆಗೆ ಆಗಮಿಸಿದರು. ಅವರನ್ನು ಮನೆಯಲ್ಲೇ ವಿಚಾರಣೆ ನಡೆಸಿದರು. ಕೇಜ್ರಿವಾಲ್ ಹಾಗೂ ಕುಟುಂಬ ಸದಸ್ಯರ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ ಅಧಿಕಾರಿಗಳು, ಶೋಧಕಾರ್ಯವನ್ನೂ ನಡೆಸಿದರು. ವಿಚಾರಣೆ ಬಳಿಕ ದೆಹಲಿ ಮುಖ್ಯಮಂತ್ರಿಯವರನ್ನು ಅವರ ಮನೆಯಲ್ಲೇ ವಶಕ್ಕೆ ಪಡೆದರು.
ಏನಿದು ಪ್ರಕರಣ?
2021-22 ರಲ್ಲಿ ದೆಹಲಿ ಸರ್ಕಾರ ಅಬಕಾರಿ ನೀತಿಯನ್ನು ರೂಪಿಸಿ ಅದನ್ನು ಜಾರಿಗೆ ತರುವಾಗ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ದಂದೆ ನಡೆದಿದೆ ಎಂಬ ಗಂಭೀರ ಆರೋಪಗಳಿವೆ. ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಅರವಿಂದ್ ಕೇಜ್ರಿವಾಲ್ ಹೆಸರು ಮತ್ತೆ ಮತ್ತೆ ಉಲ್ಲೇಖವಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ದೆಹಲಿ ಸಚಿವರು ಸೇರಿದಂತೆ ಹಲವು ಆಪ್ ಮುಖಂಡರನ್ನು ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ಇತರೆ ಯಾರೆಲ್ಲಾ ಬಂಧನ?
ಮನೀಶ್ ಸಿಸೋಡಿಯಾ, ಆಪ್ ನಾಯಕ, ಸತ್ಯೇಂದ್ರ ಜೈನ್, ಆಪ್ ಮುಖಂಡ, ಸಂಜಯ್ ಸಿಂಗ್, ಆಪ್ ನಾಯಕ, ಕವಿತಾ, ಬಿಆರ್‌ಎಸ್ ನಾಯಕಿ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಬಳಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಭಾರಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪೊಲೀಸ್ ಪಡೆಗಳ ಜತೆಗೆ ಸಿಆರ್‌ಪಿಎಫ್ ಮತ್ತು ರ‌್ಯಾಪಿಡ್ ಆಕ್ಷನ್ ಫೋರ್ಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಕೇಜ್ರಿವಾಲ್ ನಿವಾಸದ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಅಬಕಾರಿ ನೀತಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಲವಂತದ ಕ್ರಮದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಯಾವುದೇ ರಕ್ಷಣೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಇಂದು ವಿಚಾರಣೆಗೆ ಹಾಜರಾಗಬೇಕು ಎಂದು ಜಾರಿ ನಿರ್ದೇಶನಾಲಯ ಒಂಬತ್ತನೇ ಬಾರಿಗೆ ಸಮನ್ಸ್ ಜಾರಿ ಮಾಡಿತ್ತು. ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರಿದ್ದ ನ್ಯಾಯಪೀಠ ಸಮನ್ಸ್ ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ”ನಾವು ವಾದಿ, ಪ್ರತಿವಾದಿಗಳ ಮಾತುಗಳನ್ನು ಕೇಳಿದ್ದೇವೆ. ಈ ಹಂತದಲ್ಲಿ ಅರ್ಜಿದಾರರಿಗೆ ರಕ್ಷಣೆ ನೀಡುವ ಮನಸ್ಥಿತಿ ಹೊಂದಿಲ್ಲ. ಪ್ರತಿವಾದಿಗೆ ಉತ್ತರವನ್ನು ಸಲ್ಲಿಸುವ ಸ್ವಾತಂತ್ರ್ಯವಿದೆ,” ಎಂದು ಹೇಳಿತು.
ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರಾ?
ಆರೋಪ ದೃಢಪಟ್ಟರೆ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿಯಬೇಕಾಗುತ್ತದೆ. ಇನ್ನು ವಿಚಾರಣಾ ಸಂದರ್ಭದಲ್ಲಿ ಆಪ್ ಸುಪ್ರಿಂ ಕೋರ್ಟ್‌ನಿಂದ ಜಾಮೀನು ತಂದರೆ ಬಂಧನದಿಂದ ಹೊರಬಂದು ಕೇಜ್ರಿವಾಲ್ ಆಡಳಿತ ಮುಂದುವರೆಸಬಹುದು. ಆದರೆ, ಜಾರಿ ನಿರ್ದೇಶನಾಲಯದಿಂದ ಸಾಕಷ್ಟು ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ. ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀಜು ನೀಡುವಲ್ಲಿ ಸುಪ್ರಿಂ ಕೋರ್ಟ್ ಯಾವ ತೀರ್ಪು ನೀಡಲಿದೆ ಕಾದುನೋಡಬೇಕಿದೆ.