ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪದಡಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಜಾರಿ ನಿರ್ದೇಶನಾಲಯದ ನ್ಯಾಯಾಲಯವು ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಿದೆ. ನ್ಯಾಯಾಲಯದ ವಿಚಾರಣೆ ನಂತರ ಮಾತನಾಡಿದ ಡಿಕೆಶಿ ನ್ಯಾಯಾಲಯಕ್ಕೆ ಗೌರವ ಕೊಟ್ಟು ವಿಚಾರಣೆಗೆ ಹಾಜರಾಗಿದ್ದೆ. ನ್ಯಾಯಾಲಯವು ಕೆಲ ದಾಖಲೆಗಳನ್ನು ಇಡಿ ಅಧಿಕಾರಿಗಳ ಬಳಿ ಕೇಳಿದೆ. ಅವರು ದಾಖಲೆಗಳನ್ನು ಕೊಟ್ಟ ಬಳಿಕ ನಾನು ಪ್ರತಿಕ್ರಿಯಿಸುತ್ತೇನೆ. ಸದ್ಯಕ್ಕೆ ನ್ಯಾಯಾಲಯವು ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಿದೆ ಎಂದು ಹೇಳಿದ್ರು.
ಪ್ರಕರಣ ಸಂಬಂಧ ದಾಖಲೆ ನೀಡುವಂತೆ ಆರೋಪಿಗಳಾದ ಸಚಿನ್ ನಾರಾಯಣ್, ಸುನಿಲ್ ಶರ್ಮಾ, ರಾಜೇಂದ್ರ ಕೋರಿದ್ದರು. ಚಾರ್ಜ್ಶೀಟ್ ಜೊತೆಗೆ ED ಕೋರ್ಟ್ಗೆ ಸಲ್ಲಿಸಿರುವ ಎಲ್ಲ ದಾಖಲೆಗಳನ್ನು ಒದಗಿಸಬೇಕೆಂದು ಅವರು ಮನವಿ ಸಲ್ಲಿಸಿದ್ದರು. ದಾಖಲೆ ನೀಡಲು ED ಪರ ವಕೀಲರು ನಾಲ್ಕೈದು ವಾರ ಸಮಯ ಬೇಕೆಂದು ಕೋರಿದ್ದರು. ಇದಕ್ಕೆ ನ್ಯಾಯಾಲಯವು ಸಮ್ಮತಿಸಿದೆ ಎಂದು ತಿಳಿಸಿದ್ಧಾರೆ.
ಇನ್ನೂ ಇದೇ ವೇಳೆ ಇವತ್ತು ಸಮಯ ಸಿಕ್ಕರೆ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲರನ್ನು ಭೇಟಿಯಾಗಿ, ರಾಜ್ಯದ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡುತ್ತೇನೆ. ನಿನ್ನೆ ದಿನಪೂರ್ತಿ ಅವರ ಜೊತೆಗಿದ್ದರೂ ಏನೊಂದೂ ಮಾತನಾಡಲು ಸಾಧ್ಯವಾಗಿರಲಿಲ್ಲ. ದೆಹಲಿಗೆ ಬಂದಾಗ ನಮ್ಮ ನಾಯಕರನ್ನು ಭೇಟಿ ಮಾಡುವುದು ಸಂಪ್ರದಾಯ. ಹೀಗಾಗಿ ಸಮಯ ಸಿಕ್ಕರೆ ನಮ್ಮ ನಾಯಕರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.