ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಅಂಕೋಲಾದಿಂದ ಕಾರವಾರ ಕಡೆಗೆ ಆಗಮಿಸುತ್ತಿದ್ದ ಕಾರು ನಗರದ ಲಂಡನ್ ಬ್ರಿಡ್ಜ್ ಬಳಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದು, 28 ವರ್ಷದ ಕಿರಣ ಹಾಗೂ 28 ವರ್ಷದ ರಾಕೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಕಾರಿನಲ್ಲಿದ್ದ ಇನ್ನಿಬ್ಬರು ಪ್ರಜ್ವಲ್ ಹಾಗೂ ಸುನೀಲ್ ಎಂಬುವವರಿಗೆ ಗಾಯಗಳಾಗಿದ್ದು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರು ಮೂಲತಃ ಚಿಕ್ಕಮಗಳೂರು ಮೂಲದವರಾಗಿದ್ದು ಗೋವಾ ಕಡೆಗೆ ತೆರಳುತ್ತಿದ್ದರು. ಸ್ಥಳಕ್ಕೆ ಕಾರವಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಕಾರವಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.