ಮುಂಬೈ: ರೋಚಕ ಕಾರ್ಯಾಚರಣೆಯಲ್ಲಿ ಮಾದಕ ವಸ್ತು ಸಿಕ್ಕಿದ್ದು ಹೇಗೆ, ಯಾವ ರೂಪದಲ್ಲಿ ಡ್ರಗ್ಸ್ ಸಾಗಿಸುತ್ತಿದ್ರು ಎಂಬ ವಿಚಾರ ಈಗ ಬಹಿರಂಗವಾಗಿದೆ. ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿಗಳು ನಡೆಸಿರುವ ದಾಳಿಯ ವೇಳೆ ಶಾರುಖ್ ಖಾನ್ ಪುತ್ರ ಲೆನ್ಸ್ ಕೇಸ್ನಲ್ಲಿ ಡ್ರಗ್ಸ್ ಪತ್ತೆಯಾಗಿತ್ತು. ಅಲ್ಲದೆ ಇದೇ ಪ್ರಕರಣದಲ್ಲಿ ಬಂಧನದಲ್ಲಿರುವ ಇನ್ನೊಂದು ಆರೋಪಿಯ ಬ್ಯಾಗ್ನಲ್ಲಿದ್ದ ಸ್ಯಾನಿಟರಿ ಪ್ಯಾಡ್ ಮತ್ತು ಮೆಡಿಸಿನ್ ಬಾಕ್ಸ್ನಲ್ಲಿ ಮಾದಕ ದ್ರವ್ಯಗಳು ಪತ್ತೆಯಾಗಿತ್ತು ಎಂದು NCB ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ವರದಿ ನೀಡಿದೆ.
ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ವೇಳೆಯಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಲೆನ್ಸ್ ಬಾಕ್ಸ್ನಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಆತನನ್ನು ೪ ಕಾಯ್ದೆಗಳ ಅಡಿ ಬಂಧಿಸಲಾಗಿದೆ ಎಂದು NCB ಮೂಲಗಳು ಹೇಳಿವೆ. ಅದಲ್ಲದೆ ಈ ಪ್ರಕರಣದಲ್ಲಿ ಬಂಧಿತಳಾಗಿರುವ ಯುವತಿಯ ಸ್ಯಾನಿಟರಿ ಪ್ಯಾಡ್ ಮತ್ತು ಮೆಡಿಸಿನ್ ಬಾಕ್ಸ್ನಲ್ಲಿ ಮಾದಕದ್ರವ್ಯಗಳು ಪತ್ತೆಯಾಗಿದೆ. ಈ ಪಾರ್ಟಿಗೂ ಮುನ್ನ ಆರ್ಯನ್ ಖಾನ್ ಮತ್ತು ಆತನ ಗೆಳೆಯರು ನಿಷೇಧಿತ ಮಾದಕ ವಸ್ತುಗಳ ಬಗ್ಗೆ ವಾಟ್ಸಪ್ನಲ್ಲಿ ಚಾಟ್ ಮಾಡಿದ್ರು ಎಂಬ ಮಾಹಿತಿಯೂ ತನಿಖೆ ವೇಳೆ ಬಹಿರಂಗವಾಗಿದೆ.
ಈ ದಾಳಿ ವೇಳೆ ಅಧಿಕಾರಿಗಳು ಚರಸ್, MDMA, ಕೊಕೇನ್ ಮುಂತಾದ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸಮುದ್ರ ಮಧ್ಯದಲ್ಲಿ ಹಡಗಲ್ಲಿ ಕಿಕ್ ಪಾರ್ಟಿ ನಡೆಸುತ್ತಿದ್ದ ಒಟ್ಟು ೮ ಜನರನ್ನು ಭಾನುವಾರ NCB ಅಧಿಕಾರಿಗಳು ಬಂಧಿಸಿದ್ರು. ಇವರಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಇನ್ನಿಬ್ಬರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ರು. ಇನ್ನುಳಿದ ೫ ಜನರನ್ನು ಇವತ್ತು ವೈದ್ಯಕೀಯ ಪರೀಕ್ಷೆ ನಡೆಸಿ ಕೋರ್ಟ್ಗೆ ಹಾಜರುಪಡಿಸಲಿದ್ದಾರೆ.
ಅಲ್ಲದೇ ಪ್ರಕರಣದಲ್ಲಿ ಬಂಧಿತರೆಲ್ಲರನ್ನೂ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲು NCB ಮುಂದಾಗಿದೆ ಎನ್ನಲಾಗಿದೆ. ಇನ್ನೂ ಈ ಮೂಲಕ ಇನ್ನಷ್ಟ್ರು ಡ್ರಗ್ ಪೆಡ್ಲರ್ಗಳನ್ನು ಪತ್ತೆಹಚ್ಚಬಹುದು ಎನ್ನುವುದು ತನಿಖಾ ತಂಡದ ಲೆಕ್ಕಾಚಾರವಾಗಿದೆ. ಶನಿವಾರ ಮಧ್ಯರಾತ್ರಿ ನಿಖರ ಮಾಹಿತಿ ಆಧರಿಸಿ NCB ಅಧಿಕಾರಿಗಳು ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ್ರು. ಈ ವೇಳೆಯಲ್ಲಿ ಶಾರೂಖ್ ಪುತ್ರ ಸೇರಿ ಒಟ್ಟು ೮ ಜನರನ್ನು ವಶಕ್ಕೆ ಪಡೆದಿರುವ NCB ಹೆಚ್ಚಿನ ವಿಚಾರಣೆ ನಡೆಸಿ ಬಂಧಿಸಿತ್ತು. ನಂತರ ಶಾರೂಖ್ ಪುತ್ರ ಮತ್ತು ಇನ್ನಿಬ್ಬರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಈ ೩ ಜನರನ್ನು ೧ ದಿನಕ್ಕೆ NCB ವಶಕ್ಕೆ ನೀಡಿತ್ತು. ಇವತ್ತು ಶಾರುಖ್ ಮಗ ಆರ್ಯನ್ ಖಾನ್ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಲಿದ್ದಾರೆ.