ಬೆಂಗಳೂರು: ಮುಂದಿನ ವಾರ ರಾಜ್ಯಕ್ಕೆ ಅರುಣ್ ಸಿಂಗ್ ಬರುತ್ತಿದ್ದಾರೆ. ಅವರ ಎಲ್ಲ ಗೊಂದಲಗಳಿಗೆ ಇತಿಶ್ರೀ ಹಾಡ್ತಾರೆ ಎಂದು ಮಾಹಿತಿ ನೀಡಿದ ಸಚಿವ ಡಾ.ಕೆ.ಸುಧಾಕರ್, ಗಂಡ- ಹೆಂಡತಿ ನಡುವೆ ಅಸಮಾಧಾನ ಇರುತ್ತೆ. ಅಂಥಾದ್ರಲ್ಲಿ ದೊಡ್ಡ ಪಕ್ಷದಲ್ಲಿ ಅಸಮಾಧಾನ ಇರೋದಿಲ್ವಾ? ಎಂದು ಪ್ರಶ್ನಿಸಿದ್ದಾರೆ. ಅಸಮಾಧಾನ ಇರುವವರ ಜೊತೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಚರ್ಚೆ ಮಾಡುತ್ತಾರೆ. ಚರ್ಚೆ ಮಾಡಿ ಎಲ್ಲ ಗೊಂದಲಗಳನ್ನು ಬಗೆಹರಿಸುತ್ತಾರೆ ಎಂದು ತಿಳಿಸಿದ್ದಾರೆ. ಯಡಿಯೂರಪ್ಪ ಮುಂದಿನ 2 ವರ್ಷ ಸಿಎಂ ಆಗಿರುತ್ತಾರೆ. ಅರುಣ್ ಸಿಂಗ್ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಎಲ್ಲ ಹಿರಿಯ ನಾಯಕರು ಇದನ್ನೇ ಹೇಳಿದ್ದಾರೆ. ಹೀಗಾಗಿ ನಾಯಕತ್ವದ ಬಗ್ಗೆ ಚರ್ಚೆ ಮಾಡೋದು ಅನಗತ್ಯ ಎಂದು ಆರೋಗ್ಯ ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಚಾಮರಾಜಪೇಟೆ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸುಧಾಕರ್, ನಾನು ಕಾಂಗ್ರೆಸ್ನಲ್ಲಿದ್ದಾಗ ವರುಣಾ ಕ್ಷೇತ್ರ ಬಿಡಬೇಡಿ ಎಂದಿದ್ದೆ. ಸಿದ್ದರಾಮಯ್ಯ ನನ್ನ ಮಾತನ್ನು ಕೇಳಲಿಲ್ಲ. ಅವರು ಚಾಮರಾಜಪೇಟೆಗೆ ಹೋದ್ರೆ ನಾನು ಹೇಗೆ ಸ್ವಾಗತಿಸಲಿ. ಅದು ಸಿದ್ದರಾಮಯ್ಯ ತೀರ್ಮಾನ, ಅವರ ಪಕ್ಷದ ತೀರ್ಮಾನ. ಅವರು ಎಲ್ಲಿ ಬೇಕಾದರೂ ಸ್ಪರ್ಧಿಸಲಿ ಎಂದು ಹೇಳಿದ್ದಾರೆ.