ಬೆಂಗಳೂರು: ದಿವಾಕರ್ಸ್ ಮಲ್ಟಿ ಸ್ಫೆಷಾಲಿಟಿ ಹಾಸ್ಪಿಟಲ್ ವೈದ್ಯಕೀಯ ನಿರ್ದೇಶಕಿ ಮತ್ತು ವೈದ್ಯಕೀಯ ಕ್ಷೇತ್ರದ ಪ್ರಮುಖ ಮುಂದಾಳು ಡಾ.ಹೇಮಾ ದಿವಾಕರ್ ಅವರ ಸಾಮಾಜಿಕ ಮತ್ತು ಸಾರ್ವಜನಿಕರಿಗೆ ನೀಡಿದ ಸೇವೆಗಳನ್ನು ಗುರುತಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪ್ರತಿಷ್ಠಿತ ಡಾಕ್ಟರ್ಸ್ ಡೇ ಅವಾರ್ಡ್ ಘೋಷಿಸಿದ್ದು, ಶನಿವಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಖ್ಯಾತ ವೈದ್ಯ, ಶಿಕ್ಷಣ ತಜ್ಞ ಮತ್ತು ಸ್ವಾತಂತ್ರ್ಯ ಹೋರಾಟಗಾರ, ಭಾರತ ರತ್ನ ಡಾ.ಬಿ.ಸಿ. ರಾಯ್ ಹೆಸರಲ್ಲಿ ವೈದ್ಯರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಪ್ರಶಸ್ತಿಯನ್ನು ಐಎಂಎ ಅಧ್ಯಕ್ಷ ಡಾ.ಎಚ್.ಎನ್. ವಿನಯ್ ಮತ್ತು ವೈದ್ಯರ ದಿನಾಚರಣೆ ಸಮಿತಿಯ ಅಧ್ಯಕ್ಷ ಡಾ.ಮಧುಶಂಕರ್ ಎಲ್ ಅವರು ಬೆಂಗಳೂರಿನಲ್ಲಿ ನಡೆದ ಅದ್ಧೂರಿಯ ಕಾರ್ಯಕ್ರಮದಲ್ಲಿ ಗಣ್ಯರು ಮತ್ತು ಆರೋಗ್ಯ ಕ್ಷೇತ್ರದ ವಿವಿಧ ಸಾಧಕರ ಸಮ್ಮುಖದಲ್ಲಿ ಪ್ರದಾನ ಮಾಡಿದರು.
ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಮಾತನಾಡಿದ ಡಾ. ಹೇಮಾ ಅವರು, ವಿನಮ್ರನಾಗಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ. ಪ್ರಶಸ್ತಿಯ ಮೂಲಕ ನನ್ನ ಜವಾಬ್ದಾರಿಯನ್ನು ಹೆಚ್ಚಿಸಲಾಗಿದೆ. ಸಮಾಜಕ್ಕೆ ಇನ್ನಷ್ಟು ಕೊಡುಗೆ ನೀಡುವ ಸಂಕಲ್ಪವನ್ನು ಈ ಸಂದರ್ಭದಲ್ಲಿ ಮಾಡುತ್ತೇನೆ ಎಂದರು.
“ಮಹಿಳಾ ಆರೋಗ್ಯವು ರಾಷ್ಟ್ರದ ಸಂಪತ್ತು” ಎಂಬ ಧ್ಯೇಯವಾಕ್ಯದಂತೆ, ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಮಹಿಳೆಯರ ಜೀವನದ ಗುಣಮಟ್ಟವನ್ನು ಸುಧಾರಿಸಲು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವ ನನ್ನ ಧ್ಯೇಯ ಸಾರ್ಥಕವಾಗಿದೆ. ಈ ಕೆಲಸವನ್ನು ಇನ್ನಷ್ಟು ಉತ್ಸಾಹದೊಂದಿಗೆ ಮುಂದುವರಿಸುತ್ತೇನೆ ಎಂದೂ ಅವರು ತಿಳಿಸಿದರು.
ಕೋವಿಡ್ -19 ಸಾಂಕ್ರಾಮಿಕ ರೋಗವು ದೇಶಕ್ಕೆ ಅಪ್ಪಳಿಸಿದಾಗ ಅದರ ಮಾರ್ಗಸೂಚಿಗಳನ್ನು ಪಾಲಿಸಲು 4 ಸಾವಿರಕ್ಕೂ ಹೆಚ್ಚು ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ, ವಿಶೇಷವಾಗಿ ಹೆರಿಗೆ ಆಸ್ಪತ್ರೆಗಳ ಸಿಬ್ಬಂದಿಗೆ ಪ್ರಮಾಣಿತ ತರಬೇತಿ ಕಾರ್ಯಕ್ರಮವನ್ನು ನಡೆಸಿದ್ದಲ್ಲದೆ, ಎಲ್ಲ ರೀತಿಯ ಸಂದೇಹ, ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗಿದೆ ಎಂದು ಅವರು ತಮ್ಮ ಕಾರ್ಯವನ್ನು ಸ್ಮರಿಸಿದರು.