ಬೆಳಗಾವಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡೋದು ಪಕ್ಕಾ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಪುನರುಚ್ಚಾರ ಮಾಡಿದ್ದಾರೆ. ಮೈಸೂರು ಭೇಟಿ ಬಳಿಕ ಬೆಳಗಾವಿಯಲ್ಲಿ ಮಾತನಾಡಿದ ಅವರು ಸುತ್ತೂರು ಶ್ರೀಗಳ ತಾಯಿ ತೀರಿಕೊಂಡಿದ್ದರು ಹೀಗಾಗಿ ಮೈಸೂರಿಗೆ ಹೋಗಿದ್ದೆ, ಮೈಸೂರಿಗೆ ಹೋಗಿದ್ದು ರಾಜಕೀಯ ಉದ್ದೇಶದಿಂದ ಅಲ್ಲ, ಮುಂಬೈಗೆ ಹೋಗಿದ್ದು ರಾಜಕಾರಣದ ಉದ್ದೇಶದಿಂದ ಎಂದ ಅವರು ಸ್ವಾಮೀಜಿ ಎಲ್ಲ ಪಕ್ಷದ ನಾಯಕರಿಗೂ ಆಶೀರ್ವಾದ ಮಾಡ್ತಾರೆ. ಅದರಲ್ಲಿ ರಾಜಕೀಯವಿಲ್ಲ ಎಂದರು.
ನಾನು ರಾಜೀನಾಮೆ ಕೊಡೊದು ಮಾತ್ರ ನಿಜ, ಅದರಲ್ಲಿ ಎರಡು ಮಾತಿಲ್ಲ, ನಾ ರಾಜೀನಾಮೆ ನೀಡೋ ವಿಚಾರ ಮೀಡಿಯಾಗಳಿಗೆ ಹೇಗೆ ಲೀಕ್ ಆಯ್ತು ಗೊತ್ತಿಲ್ಲ, ನನ್ನ ಆಪ್ತರ ಮುಂದೆ ಹೇಳಿಕೊಂಡಿದ್ದೆ, ಇವತ್ತೇ ರಾಜೀನಾಮೆ ಇಲ್ಲ, ನಮ್ಮ ಹಿತೈಷಿಗಳು ಕೆಲವರು ಏನೇನೋ ಮಾತಾಡಿದ್ರು ಅದಕ್ಕೆ ಇನ್ನೊಂದು ಎಂಟು ದಿನ ಟೈಂ ಕೊಡಿ, ಇಲ್ಲವಾದ್ರೆ ನಾ ಇವತ್ತೇ ಮಾತನಾಡುವವನಿದ್ದೆ ಎಂದರು. ಸ್ವಪಕ್ಷಿಯರೇ ಬೆನ್ನಿಗೆ ಚೂರಿ ವಿಚಾರ ಹಾಕಿದ್ರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಪಕ್ಷ, ಆರ್.ಎಸ್.ಎಸ್ ನಾಯಕರು, ದೆಹಲಿ ನಾಯಕರು ನನ್ನನ್ನು ಪ್ರೀತಿಯಿಂದ ನೋಡಿಕೊಂಡಿದ್ದಾರೆ ಎಂದರು.
ರಾಜೀನಾಮೆ ಆತುರದ ನಿರ್ಧಾರವೇ ಎಂಬ ಪ್ರಶ್ನೆಗೆ ನೋಡಿ ನಮ್ಮ ಮನೆಯಲ್ಲಿ ಬ್ರದರ್ಸ್ ಇದ್ದಾರೆ, ಮಕ್ಕಳು ಇದಾರೆ ಇನ್ನೂ ಬಹಳಷ್ಟು ಹುಲಿಗಳು ಇವೆ. ವಿರೋಧಿಗಳು ರಮೇಶ ಜಾರಕಿಹೊಳಿಯವರನ್ನ ಮೂಲೆಗುಂಪು ಮಾಡಿದ್ವಿ ಎಂದು ತಿಳಿದಿರಬೇಕು ಅದರ 10 ಪಟ್ಟು ಹುಲಿಗಳು ನಮ್ಮಲ್ಲಿದ್ದಾರೆ ನಾವು ರೆಡಿ ಇದ್ದೇವೆ ಎಂದು ಸವಾಲು ಹಾಕಿದ್ರು. ಅಸಮಾಧಾನ ಏನು ಅಂತ ಬಹಿರಂಗವಾಗಿ ಮಾತನಾಡಲು ಆಗೋದಿಲ್ಲ ಸಾಕಷ್ಟು ತಾಂತ್ರಿಕ ಸಮಸ್ಯೆಗಳಿವೆ. ನಾನು ಮುಂಬೈನ ನಮ್ಮ ಗಾಢ್ ಫಾದರ್ ಭೇಟಿಯಾಗಿ ಚರ್ಚಿಸಿದ್ದೇನೆ ನಿಜ.
ಮಂತ್ರಿಗಾಗಿ ಲಾಭಿ ಮಾಡುವಷ್ಟು ಸಣ್ಣ ಮನುಷ್ಯ ನಾನಲ್ಲ. ಬೇರೆಯವರನ್ನ ಮಂತ್ರಿ ಮಾಡುವಷ್ಟು ಶಕ್ತಿ ನನಗಿದೆ ಎಂದರು. ಸೆಪ್ಟೆಂಬರ್ 7 ರ PLD ಬ್ಯಾಂಕ್ ಚುನಾವಣೆ ದಿನವೇ ಸಮ್ಮಿಶ್ರ ಸರ್ಕಾರ ತೆಗೆಯುವ ನಿರ್ಧಾರ ಮಾಡಿದ್ದೆ. ಆಪರೇಷನ್ ಕಮಲದ ಸಂದರ್ಭದಲ್ಲಿ ದೇವೆಂದ್ರ ಫಡ್ನವಿಸ್ ಭೇಟಿಯಾಗಿ, ಸಮ್ಮಿಶ್ರ ಸರಕಾರ ತೆಗೆಯುವ ನಿರ್ಧಾರ ಮಾಡಿದ್ದೆ ಅಂದು ಫಡ್ನವಿಸ್ ಅವರಿಗೆ ಕೆಲ ಮಾತು ಹೇಳಿದ್ದೆ. ಅಂದು ನಾನು ಅವರಿಗೆ ಹೇಳಿದ ಹಾಗೇ ಇಂದು ನಡೆಯುತ್ತಿದೆ, ಅದನ್ನು ಅವರ ಗಮನಕ್ಕೆ ತಂದಿದ್ದೇನೆ. ಫಡ್ನವಿಸ್ ನನ್ನ ಬೆನ್ನಿಗೆ ನಿಂತಿದ್ದಾರೆ ಎಂದರು. ನಾಟಕ ಮಾಡುವ ವ್ಯಕ್ತಿ ನಾನಲ್ಲ, ಯಾರಿಂದ ನನಗೆ ನೋವಾಗಿದೆ, ಅವರನ್ನ ಮನೆಗೆ ಕಳಿಸದೇ ಬಿಡೋದಿಲ್ಲ ಎಂದು ಸವಾಲು ಹಾಕಿದ್ರು.