ನಮಸ್ಕಾರ,
ಕಳೆದ ನಲವತ್ತು ವರ್ಷಗಳಿಂದ ನಮ್ಮ ಕುಟುಂಬವನ್ನು ನೀವು ಹರಿಸಿ ಹಾರೈಸಿ ಬೆಳೆಸಿದ್ದೀರಿ. ಆ ಋಣ ಭಾರ ನಮ್ಮ ಮೇಲಿದೆ. ಈ ಹಿಂದೆ ನೀವು ಕಷ್ಟದಲ್ಲಿದ್ದಾಗ ನಿಮ್ಮ ಜೊತೆ ನಿಂತುಕೊಂಡು ಸಹಾಯ ಮಾಡಿದಾಗ ಸಮಾಧಾನ ಎನಿಸುತಿತ್ತು. ಆದರೆ ಕೊರೊನಾ ಮಹಾಮಾರಿ ಸಂಕಷ್ಟಕ್ಕೆ ಸಿಲುಕಿದಾಗ, ಕೋವಿಡ್ ಸೆಂಟರ್ ಆರಂಭಮಾಡಿ ಅದಕ್ಕೆ ಬೇಕಾದ ಔಷಧಿ, ಆಕ್ಸಿಜನ್, ಮತ್ತು ಆಹಾರ ಹಾಗೂ ಕೋವಿಡ್ ನಿಂದ ರಕ್ಷಿಸಲು ವ್ಯಾಕ್ಸಿನ್ ಹೀಗೆ ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ ನಿಮ್ಮೆಲ್ಲರಿಗೆ ಸಹಾಯ ಮಾಡಿದರೂ, ಕಣ್ಣಿಗೆ ಕಾಣದ ವೈರಸ್ ಅನೇಕರ ಜೀವ ಹಾಗೂ ಜೀವನ ಕಸಿದುಕೊಂಡಿದೆ. ಹಗಲು ರಾತ್ರಿ ಕಷ್ಟಪಟ್ಟರೂ ನನ್ನ ಜನರನ್ನು ಉಳಿಸಿಕೊಳ್ಳಲಾಗಿಲ್ಲ ಎನ್ನುವ ನೋವು ನನ್ನನ್ನು ಕಾಡುತ್ತಲೇ ಇದೆ. ಇಂದು ಸಂಕಷ್ಟ ಅನುಭವಿಸುತ್ತಿರುವವರ ಪೈಕಿ ಅನೇಕರು ನನ್ನನ್ನು ಅಣ್ಣ , ತಮ್ಮ, ಮನೆ ಮಗ ಎಂಬ ಕುಟುಂಬ ಸದಸ್ಯನ ಸ್ಥಾನ ಕೊಟ್ಟು ಶಾಸಕರನ್ನಾಗಿ ಮಾಡಿದವರು. ಇವರೆಲ್ಲರೂ ಕಷ್ಟದಲ್ಲಿರುವಾಗ ಪ್ರತಿ ವರ್ಷದಂತೆ ಹುಟ್ಟು ಹಬ್ಬ ಆಚರಿಸುವುದಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲ. ನನ್ನವರು ಸಂಕಟ ಅನುಭವಿಸುತ್ತಿರುವಾಗ ನಾನು ಹೇಗೆ ಒಬ್ಬನೇ ಸಂಭ್ರಮಿಸಲಿ..?
ಸಾರ್ವಜನಿಕರಿಗೆ ಕೈ ಮುಗಿದು ಮನವಿ ಮಾಡುತ್ತೇನೆ..
ಪ್ರತಿ ಬಾರಿ ಪ್ರವಾಹದಿಂದ ಹಾಳಾದ ರಸ್ತೆ, ಮನೆಗಳ ದುರಸ್ಥಿ ಮಾಡಬೇಕಿತ್ತು. ಈ ಬಾರಿ ಕೊರೊನಾ ಮಹಾಮಾರಿಯಿಂದ ದುಃಖಕ್ಕೆ ಒಳಗಾದ ನನ್ನ ಜನರ ಮನಸ್ಸು ಹಾಗೂ ಜೀವನ ಸರಿ ಮಾಡಬೇಕಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ನನ್ನ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ. ಹೀಗಾಗಿ ಯಾರೂ ಕೂಡ ಹಾರ , ಹುಗುಚ್ಛ, ಶಾಲು ಅಂತ ಅನಗತ್ಯ ವೆಚ್ಚ ಮಾಡುವುದು ಬೇಡ. ಅದೇ ಹಣದಲ್ಲಿ ನಿಮ್ಮ ಸುತ್ತಮುತ್ತಲು ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿ. ಅದೇ ನನ್ನ ಜನ್ಮ ದಿನದಂದು ನೀವು ನೀಡುವ ಹಾರೈಕೆ, ಆಶಿರ್ವಾದ. ನನ್ನ ಹುಟ್ಟು ಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ ಎಂದು ಭಾವಿಸಿದವನು ನಾನು. ನನ್ನ ಆಶಯಕ್ಕೆ ಕೈ ಜೋಡಿಸುತ್ತೀರಿ ಎಂದು ನಂಬಿದ್ದೆನೆ.
ಇಂತಿ ನಿಮ್ಮವ
ಗಣೇಶ ಹುಕ್ಕೇರಿ