ರಾಮನಗರ: ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಒಂದಾಗಿರುವ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಡಿಕೆಶಿ ಜಯಶಾಲಿಯಾಗಿದ್ದಾರೆ. ಮೇ 10ರಂದು ಮತದಾನ ನಡೆದಿದ್ದ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆಲುವಿನ ನಗೆ ಬೀರಿದ್ದಾರೆ. ಕನಕಪುರದಲ್ಲಿ ಕಾಂಗ್ರೆಸ್ನ ಡಿ.ಕೆ.ಶಿವಕುಮಾರ್ಗೆ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಆರ್.ಅಶೋಕ್ ಹೀನಾಯ ಸೋಲುಂಡಿದ್ದಾರೆ.
ಡಿಕೆ ಶಿವಕುಮಾರ್ ಭಾವುಕ
ಕಾಂಗ್ರೆಸ್ ಭದ್ರಕೋಟೆಯಾಗಿರುವ ಕನಕಪುರದಲ್ಲಿ ಡಿಕೆ ಶಿವಕುಮಾರ್ಗೆ ಟಕ್ಕರ್ ಕೊಡಲು ಬಿಜೆಪಿ ಸಚಿವ ಆರ್ ಅಶೋಕ್ರನ್ನು ನಿಲ್ಲಿಸಿತ್ತು. ಆದ್ರೆ ಕನಕಪುರ ಮತದಾರರು ಹೊಸ ಅಭ್ಯರ್ಥಿ ಪರ ಒಲವು ತೋರಿಸಿಲ್ಲ. ಆರ್ ಅಶೋಕ್ ಹೀನಾಯವಾಗಿ ಸೋತಿದ್ದಾರೆ. ಬಿಜೆಪಿಯ ಮಾಸ್ಟರ್ ಪ್ಲಾನ್ಗಳೆಲ್ಲವೂ ತಲೆಗೆಳಗಾಗಿವೆ. ಘಟಾನುಘಟಿಗಳ ರೋಡ್ ಶೋ, ಪ್ರಚಾರ ಯಾವುದಕ್ಕೂ ಫಲ ಸಿಕ್ಕಿಲ್ಲ. ಸದ್ಯ ಗೆಲುವಿನ ನಗೆ ಬೀರಿದ ಡಿಕೆ ಶಿವಕುಮಾರ್ ಫಲಿತಾಂಶ ಕಂಡು ಭಾವುಕರಾದ್ರು. ಜೈಲಿನಲ್ಲಿದ್ದ ದಿನಗಳನ್ನ ಮೆಲುಕು ಹಾಕಿ ಭಾವುಕರಾಗಿ ಕಣ್ಣೀರಿಟ್ಟರು. ಜೈಲಿನಲ್ಲಿದ್ದಾಗ ಸೋನಿಯಾ ಗಾಂಧಿ ಅವರು ನೋಡೋಕೆ ಬಂದ ಸನ್ನಿವೇಶ ನೆನಪಿಸಿಕೊಂಡ ಭಾವುಕರಾದ್ರು.
ಇನ್ನು ಕನಕಪುರ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕ. ಹೀಗಾಗಿ ಬಿಜೆಪಿ ಒಕ್ಕಲಿಗ ಸಮುದಾಯದ ಆರ್ ಅಶೋಕ್ರನ್ನು ನಿಲ್ಲಿಸಿತ್ತು. ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ 2,24,956 ಮತದಾರರಲ್ಲಿ 1,90,124 ಮತದಾನ ಮಾಡಿದ್ದರು. ಎರಡು ದಶಕಗಳ ಹಿಂದೆ ಜೆಡಿಎಸ್ ಪಾಲಿಗೆ ಭದ್ರಕೋಟೆಯಾಗಿದ್ದ ಕನಕಪುರ, ಈಗ ಡಿಕೆ ಶಿವಕುಮಾರ್ ಅವರ ಮುಷ್ಟಿಯಲ್ಲಿದೆ. ಸಾತನೂರಿನಿಂದ ಕನಕಪುರಕ್ಕೆ ಬಂದ ಡಿ.ಕೆ. ಶಿವಕುಮಾರ್, 2008ರಿಂದ ಇಲ್ಲಿಯವರೆಗೂ ಪ್ರತಿ ಚುನಾವಣೆಯಲ್ಲೂ ಗೆಲುವನ್ನು ತಮ್ಮದಾಗಿಸಿಕೊಂಡು ಬಂದಿದ್ದಾರೆ. ಡಿಕೆಶಿಗೆ ಎದುರಾಳಿಗಳೇ ಇಲ್ಲ.ಕಳೆದ ಹಲವು ವರ್ಷದಿಂದ ಸೋಲನ್ನೆ ಕಾಣದ ಡಿ.ಕೆ.ಶಿವಕುಮಾರ್ ಅವರಿಗೆ ಸಹೋದರ ಡಿ.ಕೆ.ಸುರೇಶ್ ಅವರು ಆನೆ ಬಲ ಇದ್ದಂತೆ.
1983 ರಿಂದ 2008ರವರೆಗೆ(6 ಬಾರಿ) ಪಾರುಪತ್ಯ ಮೆರೆದಿದ್ದ ಪಿ.ಜಿ.ಆರ್.ಸಿಂಧ್ಯಾ ಅವರು 2013ರಲ್ಲಿ ಡಿಕೆಶಿಗೆ ಸರ್ಧೆ ನೀಡಿ, 68 ಸಾವಿರ ಮತ ಪಡೆದರು. ಈಗ ಡಿಕೆಶಿ ಜೊತೆ ಗುರುತಿಸಿಕೊಂಡಿದ್ದಾರೆ. ಬಳಿಕ ಜೆಡಿಎಸ್ನಿಂದ ಫೀನಿಕ್ಸಿ ಹಕ್ಕಿಯಂತೆ ಎದ್ದು ಬಂದಿದ್ದ ವಿಶ್ವನಾಥ್, ಕ್ಷೇತ್ರ ಮರುವಿಂಗಡಣೆಯ ನಂತರ 2008ರಲ್ಲಿ ನಡೆದ ಚುನಾವಣೆಯಲ್ಲಿ ಕೇವಲ 7 ಸಾವಿರ ಮತಗಳ ಅಂತರದಿಂದ ಡಿಕೆಶಿ ಎದುರು ಮಂಡಿಯೂರಿದ್ದರು. ಇನ್ನು 2018ರ ಚುನಾವಣೆಯಲ್ಲಿ ಡಿಕೆಶಿ ಜೆಡಿಎಸ್ ಅಭ್ಯರ್ಥಿ ನಾರಾಯಣಗೌಡ ವಿರುದ್ದ 79,909 ಮತಗಳಿಂದ ಗೆಲುವು ಸಾಧಿಸಿದ್ದರು.