ಕೂಗು ನಿಮ್ಮದು ಧ್ವನಿ ನಮ್ಮದು

ಯಡಿಯೂರಪ್ಪನವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ನಾಯಕರ ನಿರ್ಧಾರ: ಡಿ.ಕೆ.ಶಿವಕುಮಾರ ಆರೋಪ

ಬೆಂಗಳೂರು: ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ಪ್ರಕರಣ ಬಿಜೆಪಿಯ ಆಂತರಿಕ ಕುತಂತ್ರ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಯಡಿಯೂರಪ್ಪ ಸಿಎಂ ಅಲ್ಲ. ಸರ್ಕಾರದ ಪ್ರತಿನಿಧಿಯಾಗಿ ಭಾಗಿಯಾಗಿಲ್ಲ. ಮೀಸಲಾತಿ ವಿಚಾರದಲ್ಲಿ ಸಿಎಂ ದೊಡ್ಡ ಗೊಂದಲ ಕ್ರಿಯೇಟ್ ಮಾಡಿದ್ದಾರೆ ಎಂದರು. ಯಡಿಯೂರಪ್ಪರನ್ನ ಮೊದಲು ಸೈಡ್ ‌ಲೈನ್ ಮಾಡಿದ್ರು.ಈಗ ಅಮಿತ್ ಶಾ ಬಂದು ಟಿಫನ್ ಮಾಡಿ ಮತ್ತೆ ಅವರನ್ನು ಮುಂದೆ ತಂದಿದ್ದಾರೆ. ಯಡಿಯೂರಪ್ಪಗೆ ಬೆನ್ನು ತಟ್ಟಿ ಬಂದಿದ್ದಾರೆ. ಮತ್ತೊಂದು ಕಡೆಯಲ್ಲಿ ಯಡಿಯೂರಪ್ಪ ಮನೆ ಮೇಲೆ ಕಲ್ಲು ಹೊಡೆಯುತ್ತಾರೆ ಅಂದರೆ ಕಾರಣ ಏನು? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಇದು ಬಿಜೆಪಿಯ ಆಂತರಿಕ ಕುತಂತ್ರ
ಯಡಿಯೂರಪ್ಪರನ್ನ ಪಕ್ಷದಲ್ಲಿ ಮುಗಿಸಬೇಕು, ರಾಜಕೀಯದಲ್ಲಿ ಮುಗಿಸಬೇಕು ಅಂತ ಹೀಗೆ ಮಾಡಿದ್ದಾರೆ. ಬೇಕು ಅಂತ ಯಡಿಯೂರಪ್ಪ ಮನೆ ಮೇಲೆ ಕಲ್ಲು ಹೊಡೆದಿದ್ದಾರೆ. ಸಿಎಂ ಮನೆ ಮೇಲೆ ಅಧಿಕಾರದಲ್ಲಿ ಇರೋರ ಮೇಲೆ ಕಲ್ಲು ಹೊಡೆದಿದ್ದರೆ ಅದು ಒಂದು ಲೆಕ್ಕಚಾರ. ಯಡಿಯೂರಪ್ಪನವರ ಮೇಲೆ‌ ಮಾಡ್ತಾರೆ ಅಂತ ಇದು ಪಕ್ಷದ ಒಳಗಿನ ಫೈಟ್ ಎಂದರು‌. ಬಿಜೆಪಿಯಲ್ಲಿ ಆಂತರಿಕವಾಗಿ ಯಾರಿಗೂ ಸಮಾಧಾನ ಇಲ್ಲ ಹೀಗಾಗಿಯೇ ಬೆಳಗ್ಗೆ ಎದ್ದರೆ ರಾಷ್ಟ್ರೀಯ ನಾಯಕರು ಬಂದು ಎಲ್ಲರನ್ನು ಒಟ್ಟು ಗೂಡಿಸುವ ಕೆಲಸ ಮಾಡ್ತಿದ್ದಾರೆ. ಎಲ್ಲರಿಗೂ ಕಡಿವಾಣ ಹಾಕಿ, ಹೆದರಿಸಿ, ಬೆದರಿಸಿ, ರೈಟ್ ಹೋಗಬೇಡ, ಲೆಫ್ಟ್ ಹೋಗಬೇಡ ಅಂತ ಕಂಟ್ರೋಲ್ ‌ಮಾಡ್ತಿದ್ದಾರೆ. ಫೋನ್ ಗಳನ್ನು ಕಿತ್ತು ಕೊಂಡು ಬಹಳ ಅಚ್ಚುಕಟ್ಟಾಗಿ ಎಲ್ಲವನ್ನು ನಡೆಸುತ್ತಿದ್ದಾರೆ ಎಂದರು‌.

ಶಿಕಾರಿಪುರದಲ್ಲಿ ನಡೆದಿತ್ತು ಭಾರೀ ಪ್ರತಿಭಟನೆ
ಸೋಮವಾರದಂದು ಶಿಕಾರಿಪುರದಲ್ಲಿ ಯಡಿಯೂರಪ್ಪನವರ ನಿವಾಸ ಹಾಗೂ ಅದರ ಮುಂದಿನ ಕಚೇರಿಯ ಮೇಲೆ ದಾಳಿ ನಡೆಸಿದ್ದ ಪ್ರತಿಭಟನಾಕಾರರು, ಮೀಸಲಾತಿಯ ನಿರ್ಧಾರ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದರು. ಟೈರ್ ಗಳನ್ನು ಸುಟ್ಟಿದ್ದಲ್ಲದೆ, ಯಡಿಯೂರಪ್ಪನವರ ನಿವಾಸದ ಅಕ್ಕಪಕ್ಕದ ಮನೆಗಳಿಗೆ ಸಂಬಂಧಿಸಿದ ವಾಹನಗಳನ್ನು ಜಖಂಗೊಳಿಸಿದರು. ಯಡಿಯೂರಪ್ಪನವರ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿಸಿದರು. ಈ ಸಂದರ್ಭದಲ್ಲಿ ಪೊಲೀಸರಿಗೆ ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆಲವರಿಗೆ ಗಾಯಗಳಾಗಿವೆ
ಮತ್ತಷ್ಟು ಜನರು, ಯಡಿಯೂರಪ್ಪನವರ ನಿವಾಸದ ಮುಂದಿರುವ ಅವರ ಸಾರ್ವಜನಿಕ ಸಂಪರ್ಕ ಕಚೇರಿಯ ಮೇಲೂ ದಾಳಿ ನಡೆಸಿದರು. ಕಚೇರಿಯು ಬಾಗಿಲು ಹಾಕಿದ್ದರಿಂದ ಅವರಿಗೆ ಕಚೇರಿಯೊಳಗೆ ಪ್ರವೇಶ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಕಚೇರಿಯ ಮೇಲೆ ಹತ್ತಿ ಹೋಗಿ ಯಡಿಯೂರಪ್ಪ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

error: Content is protected !!